

ಚಿತ್ರದುರ್ಗ: ಗ್ರಾಮ ಸಭೆ ನಡೆಸುವ ಉದ್ದೇಶವೇ ಅರ್ಹರನ್ನು ಆಯ್ಕೆ ಮಾಡಲು. ಆದ್ದರಿಂದ ಫಲಾನುಭವಿಗಳು ತ್ವರಿತವಾಗಿ ಮನೆ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಲಹೆ ನೀಡಿದರು.
ತಾಲೂಕಿನ ಜೆ.ಎನ್.ಕೋಟೆ ಮತ್ತು ಐನಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ವಸತಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಗ್ರಾಮ ಸಭೆಯ ಮೂಲಕ ಫಲಾನುಭವಿಗಳ ಆಯ್ಕೆ, ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಜೆ.ಎನ್.ಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಚೆಕ್ ಡ್ಯಾಂ, ಅಂಗನವಾಡಿಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಅಲ್ಲದೆ, ಈ ಭಾಗದಲ್ಲಿ ಎಸ್ಸಿ-60, ಎಸ್ಟಿ-50, ಸಾಮಾನ್ಯ-50 ಸೇರಿ ಒಟ್ಟು 160 ಮನೆ ನೀಡಲಾಗಿದೆ ಎಂದರು.
ಐನಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಎಸ್ಸಿ-65, ಎಸ್ಟಿ-40, ಸಾಮಾನ್ಯ-50 ಒಟ್ಟು 155 ಮಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಜಿ.ಆರ್.ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಎಸ್ಸಿ, ಎಸ್ಟಿ ತಲಾ 50, ಸಾಮಾನ್ಯ 30 ಸೇರಿ 130 ಮನೆ ನಿರ್ಮಿಸಲಾಗಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷರಾದ ವಿದ್ಯಾಶ್ರೀ, ವೀಣಾ, ಸದಸ್ಯರಾದ ಶಿವಮೂರ್ತಿ, ಪಾಲಯ್ಯ, ತಿಮ್ಮಣ್ಣ, ಈರಣ್ಣ, ಮಲ್ಲಪ್ಪ, ಪವಿತ್ರ, ಶರಣಪ್ಪ, ಉಮೇಶ್, ನಾಗರಾಜ್, ಶಂಕರಮ್ಮ, ಪಿಡಿಒಗಳಾದ ನಿರ್ಮಲಾ, ಶ್ರುತಿ ಇತರರಿದ್ದರು.