

ಬೆಳಗಾವಿ: ಮೈಸೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಸ್ಟೆಲ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, 100 ಮಕ್ಕಳಿರುವ ಜಾಗದಲ್ಲಿ ಇನ್ನೂರು ಮೂನ್ನೂರು ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಾಸ್ಟೆಲ್ ಸಮಸ್ಯೆ ಬಗೆ ಹರಿಸಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೇಲೆ ಮಾತನಾಡಿದ ಅವರು, ಹಾಸ್ಟೆಲ್‌ಗಳಿಗೆ ಸಿಎ ನಿವೇಶನ ಮಂಜೂರಾಗಿದ್ದರೂ ಇಲಾಖೆಯವರು ಪಡೆದುಕೊಂಡಿಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಕೊಡುತ್ತಿಲ್ಲ ಎಂದು ಕ್ರಿಮಿನಲ್ ಕೇಸ್ ದಾಖಲಾಗಿದೆ. ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಇಲ್ಲದೆ ಕಾಲೇಜಿಗೆ ಬರುತ್ತಿಲ್ಲ. ಆಶ್ರಮ ಶಾಲೆಗಳಲ್ಲಿ ಮಕ್ಕಳಿಗೆ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಬೇಕು. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್‌ಗಳೆಷ್ಟು, 2024-25ನೇ ಸಾಲಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಎಷ್ಟು ಹಣ ಒದಗಿಸಲಾಗಿದೆ ಎಂದು ಪ್ರಶ್ನಿಸಿದರು.
ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಉತ್ತರಿಸಿ, ಮೈಸೂರು ಜಿಲ್ಲೆಯಲ್ಲಿ 85 ಹಾಸ್ಟೆಲ್‌ಗಳಿದ್ದು 8462 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 70 ಸ್ವಂತ ಕಟ್ಟಡಗಳಿದ್ದು 15 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. 2024-25 ನೇ ಸಾಲಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ 225 ಕೋಟಿ ರೂ. ಒದಗಿಸಲಾಗಿದ್ದು. 112.50 ಕೋಟಿ ವೆಚ್ಚವಾಗಿದೆ. ಸ್ಕಾಲರ್‌ಶಿಪ್, ಸ್ಯಾನಿಟರಿ ನ್ಯಾಪ್‌ಕಿನ್ ನೀಡಲು ಹಾಗೂ ಸ್ವಂತ ಕಟ್ಟಡದ ನಿರ್ಮಾಣಕ್ಕೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.