ಯುದ್ಧೋಪಾದಿಯಲ್ಲಿ ಯೋಗ್ಯ ಪುನರ್ವಸತಿ ಕೇಂದ್ರ ನಿರ್ಮಿಸಿ

J.T.Patila, victims, village drowning
ಕಲಾದಗಿಯಲ್ಲಿ ನಡೆದ ಮುಳುಗಡೆ ಸಂತ್ರಸ್ತರ ಸಭೆಯಲ್ಲಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಜಮೀರಹ್ಮದ್ ಜಮಾದಾರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಮುತ್ತು ದೇಸಾಯಿ, ಯುಕೆಪಿ ಮಹಾವ್ಯವಸ್ಥಾಪಕ ಭವರಸಿಂಗ್ ಮೀನಾ ಇದ್ದರು.
Published on

ಕಲಾದಗಿ : ಗ್ರಾಮ ಮುಳುಗಡೆಗೆ ಸಂಬಂಧಿಸಿದಂತೆ ವಾಸಕ್ಕೆ ಯೋಗ್ಯವಾದ ಪುನರ್ವಸತಿ ಕೇಂದ್ರ ನಿರ್ಮಾಣ ಸೇರಿ ಸಂತ್ರಸ್ತರ ನಾನಾ ಸಮಸ್ಯೆಗಳಿದ್ದು, ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳೇ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಜೆ.ಟಿ.ಪಾಟೀಲ ಖಡಕ್ಕಾಗಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಕಲಾದಗಿ ಸಂತ್ರಸ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಳುಗಡೆ ಗ್ರಾಮ ಕಲಾದಗಿ ಸ್ಥಳಾಂತರಕ್ಕೆ ಈವರೆಗೆ ಸಾಕಷ್ಟು ಹೋರಾಟಗಳು, ಜನಪ್ರತಿನಿಧಿಗಳು ಹಾಗೂ ಯುಕೆಪಿ ಅಧಿಕಾರಿಗಳ ಸಭೆಗಳು ನಡೆದಿವೆ. ಆದರೆ, ನಿರೀಕ್ಷಿತ ಲಿತಾಂಶ ಸಿಕ್ಕಿಲ್ಲ. ಇವತ್ತಿನ ಸಭೆಯಿಂದ ಕಾಲಮಿತಿಯೊಳಗೆ ಸಂತ್ರಸ್ತರ ಬೇಡಿಕೆಗಳು ಈಡೇರಬೇಕು ಎಂದು ಒತ್ತಾಯಿಸಿದರು.

ಬ್ರಿಟಿಷರ ಆಳ್ವಿಕೆಯಲ್ಲಿ ಇಪ್ಪತ್ತು ವರ್ಷ ಜಿಲ್ಲೆಯಾಗಿ ಮೆರೆದ ಐತಿಹಾಸಿಕ ಊರಾದ ಕಲಾದಗಿ ಮರುನಿರ್ಮಾಣ ಅತ್ಯುತ್ತಮ ರೀತಿಯಲ್ಲಿ ನಡೆಯಬೇಕು. ಪುನರ್ವಸತಿ ಕೇಂದ್ರದಲ್ಲಿ ನಿವೇಶನ ಹಂಚಿಕೆ, ನೀರು, ವಿದ್ಯುತ್ ಸೇರಿ ಇತರ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಪುನರ್ವಸತಿ ಕೇಂದ್ರದಲ್ಲಿ ಯುದ್ಧೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಸಭೆಗೆ ನೀಡಿರುವ 18 ತಿಂಗಳ ಗಡುವಿನಲ್ಲಿ ಯೋಗ್ಯವಾದ ಪುನರ್ವಸತಿ ಕೇಂದ್ರ ನಿರ್ಮಿಸಲು ಬದ್ಧರಾಗಿ ಕೆಲಸ ಮಾಡಬೇಕು. ನಾನು ನಿಮಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದರು.

ಪು.ಕೇಂದ್ರ ನಿರ್ಮಾಣ ಜತೆಗೆ ನಿವೇಶನಗಳ ಹಕ್ಕುಪತ್ರ ವಿತರಣೆ, ಮುಳಗುಡೆಯಿಂದ ಬಿಟ್ಟು ಹೋಗಿರುವ ಮನೆಗಳ ಮರು ಸರ್ವೇ ಸೇರಿ ಗ್ರಾಮದ ಸಂತ್ರಸ್ತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಪುನರ್ವಸತಿ ಕೇಂದ್ರದಲ್ಲಿ ಮನೆ ಕಟ್ಟಿಕೊಳ್ಳುವ ಸಂತ್ರಸ್ತರಿಗೆ ರಿಯಾಯಿತಿ ದರದಲ್ಲಿ ಮರಳು ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗುಣಮಟ್ಟದ ಕಾಮಗಾರಿಗೆ ಸೂಚನೆ: ಕಲಾದಗಿ ಆರ್‌ಸಿ ನಿರ್ಮಾಣದಲ್ಲಿ ಕಳಪೆ ಕಾಮಗಾರಿಗಳು ನಡೆದಿರುವುದು, ಸಾಕಷ್ಟು ಹಣ ಪೋಲಾಗಿರುವ ಬಗ್ಗೆ ಮಾಹಿತಿ ಇದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ. ಅಲ್ಲಿ ನಡೆಯುವ ಪ್ರತಿ ಕಾಮಗಾರಿಯೂ ಗುಣಮಟ್ಟದ್ದಾಗಿರುವಂತೆ ಎಚ್ಚರ ವಹಿಸಿ ಎಂದು ಶಾಸಕರು ಸೂಚಿಸಿದರು. ಈಗಾಗಲೇ ಹಕ್ಕುಪತ್ರ ನೀಡಿರುವ ನಿವೇಶನಗಳ ಪ್ರದೇಶದಲ್ಲಿ ತ್ವರಿತವಾಗಿ ಸೌಕರ್ಯಗಳನ್ನು ಕಲ್ಪಿಸಿ ಎಂದು ಸೂಚಿಸಿದರು.

ಸರ್ಕಾರ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ಯುಕೆಪಿ ಸಮಸ್ಯೆಗಳನ್ನು ಬಗೆಹರಿಸಲು, ಸಂತ್ರಸ್ತರನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕಲಾದಗಿ ಸೇರಿ ಬೀಳಗಿ ಮತಕ್ಷೇತ್ರದ ಮುಳುಗಡೆ ಸಂತ್ರಸ್ತರು 2-3 ವರ್ಷದಲ್ಲಿ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರವಾಗಲು ಮಾನಸಿಕವಾಗಿ ಈಗಿನಿಂದಲೇ ಸಿದ್ಧರಾಗಿ ಎಂದು ಮನವಿ ಮಾಡಿದರು.

ಅಧಿಕಾರಿ, ಸಂತ್ರಸ್ತರೊಂದಿಗೆ ಚರ್ಚೆ: ಇದಕ್ಕೂ ಮೊದಲು ಗ್ರಾಮಸ್ಥರಿಂದ ಮುಳುಗಡೆ ಸಮಸ್ಯೆ, ಆಗಬೇಕಾಗಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದು ಸಭೆಯಲ್ಲಿದ್ದ ಯುಕೆಪಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳ ಪರಿಹಾರಕ್ಕೆ ರೂಪರೇಷೆ ತಯಾರಿಸಲಾಯಿತು.

ಗ್ರಾಪಂ ಅಧ್ಯಕ್ಷ ಜಮೀರಹ್ಮದ್ ಜಮಾದಾರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮುಳುಗಡೆ ಹೋರಾಟ ಸಮಿತಿ ಅಧ್ಯಕ್ಷ ಮುತ್ತು ದೇಸಾಯಿ, ಯುಕೆಪಿ ಮಹಾ ವ್ಯವಸ್ಥಾಪಕ ಭವರಸಿಂಗ್ ಮೀನಾ, ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹಿರಿಯ ಅಧಿಕಾರಿಗಳಾದ ಹನುಮಂತಪ್ಪ ದಾಸರ, ವಿಶ್ವನಾಥ ಮಿಕ್ಕಲ್,ಹಿರೇಮಠ, ಎಸ್.ವೈ.ದೊಡಮನಿ ಇದ್ದರು.

ಇನ್ನುಳಿದ ಊರುಗಳ ಸಮಸ್ಯೆ ಚರ್ಚೆ
ಸಭೆ ಕೇವಲ ಕಲಾದಗಿ ಮುಳುಗಡೆ ಸಮಸ್ಯೆ, ಪರಿಹಾರಗಳಿಗೆ ಸೀಮಿತಗೊಳ್ಳದೆ ಯುಕೆಪಿ ಯೋಜನೆಯಿಂದ ಬಾಧಿತಗೊಳ್ಳುವ ಈ ಭಾಗದ ಹಿರೇಸಂಶಿ, ಚಿಕ್ಕಸಂಶಿ, ಗೋವಿಂದಕೊಪ್ಪ, ಅಂಕಲಗಿ, ಶಾರದಾಳ, ಉದಗಟ್ಟಿ ಊರುಗಳ ನಾನಾ ಮುಳುಗಡೆ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಯಿತು.
ಸದರಿ ಗ್ರಾಮಗಳ ಮುಖಂಡರು ತಮ್ಮೂರ ಸಮಸ್ಯೆಗಳ ಬಗ್ಗೆ ವಿವರಿಸಿದಾಗ ಅವುಗಳ ಈಡೇರಿಕೆಗೆ ಶಾಸಕ ಜೆ.ಟಿ.ಪಾಟೀಲ ಹಾಗೂ ಯುಕೆಪಿ ಅಧಿಕಾರಿಗಳು ಭರವಸೆ ನೀಡಿದರು.
ಮರುಸರ್ವೇಗೆ ಆದೇಶ
ಕಲಾದಗಿಯಲ್ಲಿ 65 ಮನೆಗಳು ಮಾತ್ರ ಮುಳುಗಡೆ ಪ್ರಕ್ರಿಯೆಯಿಂದ ಬಿಟ್ಟಿರುವುದು ಮರು ಸರ್ವೇಯಿಂದ ಗೊತ್ತಾಗಿದೆ ಎಂದು ಸಭೆಗೆ ಯುಕೆಪಿ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ವಿವರಿಸುತ್ತಿದ್ದಂತೆ ಕೆಲ ಸಂತ್ರಸ್ತರು ಆಕ್ಷೇಪ ವ್ಯಕ್ತಮಾಡಿದರು.
ಮುಳುಗಡೆ ಪ್ರಕ್ರಿಯೆಯಿಂದ ಗ್ರಾಮದಲ್ಲಿ 400ಕ್ಕೂ ಅಧಿಕ ಮನೆಗಳು ಬಿಟ್ಟು ಹೋಗಿವೆ. ಅಧಿಕಾರಿಗಳು ಸರಿಯಾಗಿ ಮರು ಸರ್ವೇ ಮಾಡಿಲ್ಲ ಎಂದು ಕೆಲ ಸಂತ್ರಸ್ತರು ಆರೋಪಿಸುತ್ತಿದ್ದಂತೆ ಶಾಸಕ ಜೆ.ಟಿ.ಪಾಟೀಲರು ಮತ್ತೊಮ್ಮೆ ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net