‘ಬುಹುರೂಪಿ ಜನಪದ ಉತ್ಸವ’ಕ್ಕೆ ಚಾಲನೆ

25
Published on

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಮುನ್ನುಡಿಯಾಗಿ ‘ಬುಹುರೂಪಿ ಜನಪದ ಉತ್ಸವ’ಕ್ಕೆ ಸೋಮವಾರ ಸಂಜೆ ಕಲಾತ್ಮಕ ಚಾಲನೆ ದೊರೆಯಿತು.

ಕಿಂದರಿಜೋಗಿ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ಜಾನಪದ ಕಲಾವಿದೆ ಸವಿತಾ ಚೀರುಕುನ್ನಯ್ಯ ಹೊಂಬಾಳೆ ಬಿಡಿಸಿ, ಮಡಿಕೆಗೆ ಭತ್ತ ತುಂಬುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ಅದರೊಂದಿಗೆ ಸಂಕ್ರಾಂತಿ ಹಬ್ಬದ ಮುನ್ನಾದಿನವೇ ರಂಗಾಯಣದ ಅಂಗಳದಲ್ಲಿ ರಂಗಸಂಭ್ರಮ ಮನೆ ಮಾಡ ತೊಡಗಿತು.

ಸವಿತಾ ಚೀರುಕುನ್ನಯ್ಯ ಮಾತನಾಡಿ, ಜಾನಪದ ಕಲಾವಿದರು ಈ ನೆಲದ ಸಂಸ್ಕೃತಿ, ಪರಂಪರೆ ಉಳಿಸಲು ಅನುದಿನವೂ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ಬದುಕಿಗೆ ಭದ್ರತೆ ಕಲ್ಪಿಸಬೇಕು. ಸಾಕಷ್ಟು ಜನ ಇಂದು ಜಾನಪದ ಕಲೆ ನಶಿಸಿ ಹೋಗುತ್ತಿದೆ ಎನ್ನುತ್ತಾರೆ. ಆದರೆ, ಇದು ತಪ್ಪು ಗ್ರಹಿಕೆ. ಜಾನಪದ ಸಮೃದ್ಧವಾಗಿದೆ. ಸಾವಿರಾರು ಕಲಾವಿದರು ಇದರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಈ ಕಲೆಯನ್ನು ಮಾಧ್ಯಮಗಳು ಹೆಚ್ಚು ಪ್ರಚುರಪಡಿಸಬೇಕು. ಪ್ರಚಾರಕೊಟ್ಟಷ್ಟು ಜಾನಪದ ಕಲಾವಿದರು ಹೆಚ್ಚು ಬೆಳಕಿಗೆ ಬರುತ್ತಾರೆ ಎಂದು ತಿಳಿಸಿದರು.

ನಿತ್ಯ ಜಾನಪದ ಕಲಾವಿದರು ನೂರಾರು ಕಿ.ಮೀ ಪ್ರಯಾಣಿಸುತ್ತಾರೆ. ಆದರೆ, ಏನಾದರೂ ಅನಾಹುತವಾದರೆ ಭದ್ರತೆ ಇಲ್ಲ. ಹೀಗಾಗಿ ಸರ್ಕಾರ ಭದ್ರತಾ ನಿಧಿಯನ್ನು ಸ್ಥಾಪನೆ ಮಾಡಬೇಕು. ಕಲಾವಿದರ ಜೀವಕ್ಕೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಪೂಜಾ ಕುಣಿತ ಗಂಡು ಕಲೆ. ಆದರಿಂದು ಹೆಣ್ಣುಮಕ್ಕಳು ಈ ಪರಂಪರೆಯನ್ನು ಮುಂದವರಿಸಕೊಂಡು ಹೋಗುತ್ತಿದ್ದಾರೆ. ನನ್ನಪ್ಪ ಪೂಜಾಕುಣಿತ ಕಲಾವಿದ. ಹಾಗಾಗಿ ನನ್ನ ಕುಟುಂಬದಕ್ಕೂ ಜಾನಪದಕ್ಕೂ ಅವಿನಾಭಾವ ನಂಟು ಇದೆ. ನಾನಿಂದು ಜಾನಪದ ಕಲೆಯ ಮೂಲಕವೇ ಕನ್ನ ಬದುಕನ್ನು ಕಟ್ಟಿಕೊಂಡಿದ್ದೇನೆ. ದೇಶ-ವಿದೇಶದಲ್ಲಿ ಜಾನಪದ ಕಲೆ ಪಸರಿಸಿ ಬಂದಿದ್ದೇನೆ ಎಂದು ತಿಳಿಸಿದರು.

ರಂಗಸಮಾಜದ ಸದಸ್ಯ ಮಹಾಂತೇಶ್ ಗಜೇಂದ್ರಗಡ ಮಾತನಾಡಿ, ಜಾನಪದದ ಹಲವು ಕಲೆಗಳು ಪರಂಪರೆಯನ್ನು ಸಾರುತ್ತಿವೆ. ಉತ್ತರ ಕರ್ನಾಟಕದಲ್ಲಿ ಜಾನಪದ ಕಾರ‌್ಯಕ್ರಮ ನಿರಂತರವಾಗಿ ನಡೆಯುತ್ತಿರುತ್ತದೆ. ಸಾಕಷ್ಟು ಜನರು ಕೂಡ ಸೇರುತ್ತಾರೆ. ಇದು ಎಲ್ಲ ಕಡೆ ಪಸರಿಸಬೇಕು ಎಂದು ಆಶಿಸಿದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಂಗಾಯಣದ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ, ರಂಗಸಮಾಜದ ಸದಸ್ಯ ಸುರೇಶ್ ಬಾಬು, ಜನಪದ ಉತ್ಸವದ ಸಂಚಾಲಕಿ ಗೀತಾ ಮೋಂಟಡ್ಕ ಸೇರಿದಂತೆ ಇತರರು ಇದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ಮಂಗಳೂರಿನ ಯಕ್ಷಮಿತ್ರ ಬಳಗ ಪ್ರಸ್ತುತ ಪಡಿಸಿದ ‘ನರಕಾಸುರ ವಧೆ’ ಯಕ್ಷಗಾನ ಪ್ರಸಂಗ ಮಾಗಿಯ ಚಳಿಯಲ್ಲೂ ರಂಗಾಸಕ್ತರಿಗೆ ಬೆಚ್ಚನೆಯ ಅನುಭವ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net