

ಬೂದಿಕೋಟೆ: ಕೋಳಿಗಳಿಂದ ಕರೊನಾ ಹರಡುತ್ತದೆ ಎಂಬ ವದಂತಿಯಿಂದ ಕೋಳಿ ಮಾಂಸದ ಬೆಳೆ ಪಾತಾಳಕ್ಕೆ ಕುಸಿದಿದ್ದರಿಂದ ಮಾಗೊಂದಿ ಗ್ರಾಮದ ರೈತರೊಬ್ಬರು ಕೋಳಿ ಮರಿಗಳ ಜೀವಂತ ಸಮಾಧಿ ಮಾಡಿದ್ದಾರೆ.
ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಕೋಳಿ ಸಾಕಾಣಿಕೆಗಾರ ಸತ್ಯ ಎಂಬುವವರು ಕೋಳಿಾರಂ ಅನ್ನು ಲೀಸ್‌ಗೆ ಪಡೆದು ಕೋಳಿ ಮರಿ ಸಾಕಾಣಿಕೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ದೇಶ ಹಾಗೂ ರಾಜ್ಯದಲ್ಲಿ ಕರೊನಾ ಹರಡಿರುವ ಕಾರಣ ಕೋಳಿಗಳಿಂದ ಕರೊನಾ ಹರಡುತ್ತದೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಇದರಿಂದ ಕೋಳಿ ಮಾಂಸದ ಬೇಡಿಕೆ ಮತ್ತು ಬೆಲೆ ಪಾತಾಳಕ್ಕೆ ಕುಸಿದಿದೆ.
ಮುಂದಿನ ದಿನಗಳಲ್ಲಿ ಕೋಳಿಗಳ ಬೇಡಿಕೆ ಇನ್ನೂ ಕಡಿಮೆಯಾಗಬಹುದು ಎಂಬ ಉದ್ದೇಶದಿಂದ, ಸಾಕಿರುವ ಸುಮಾರು 9 ದಿನಗಳ 10 ಸಾವಿರ ಮರಿಗಳನ್ನು ಮಂಗಳವಾರ ಬೆಳಗ್ಗೆ ಗ್ರಾಮದ ಹೊರ ವಲಯದಲ್ಲಿ ಜೀವಂತ ಸಮಾಧಿ ಮಾಡಿದ್ದಾರೆ.
ರೈತರು ಸಾಕಾಣಿಕೆ ಮಾಡಿರುವ ಕೋಳಿಗಳು ಮಾರಾಟವಾಗದೆ ಫಾರಂಗಳಲ್ಲಿಯೇ ಉಳಿಯುತ್ತಿರುವುದರಿಂದ ಫೀಡ್, ವ್ಯಾಕ್ಸಿನ್ ಹಾಗೂ ನಿರ್ವಹಣಾ ವೆಚ್ಚ ಸೇರಿ ಲಕ್ಷಾಂತರ ರೂ. ನಷ್ಟವಾಗುವ ಸಂಭವವಿದ್ದು, ಈಗಲೇ ಮರಿಗಳನ್ನು ಸಾಯಿಸಿದರೆ ಲಕ್ಷಾಂತರ ರೂ. ನಷ್ಟ ತಪ್ಪಿಸಬಹುದು ಎನ್ನುವ ಆಲೋಚನೆಯಿಂದ ಮರಿಗಳನ್ನು ಸಾಮೂಹಿಕವಾಗಿ ಮಣ್ಣುಪಾಲು ಮಾಡಿದ್ದಾರೆ.
ಇದನ್ನರಿಯದ ಕೆಲವರು ಕೋಳಿ ಮರಿಗಳಿಗೆ ಕರೊನಾ ವೈರಸ್ ತಗುಲಿದೆ, ಆದ್ದರಿಂದ ಮರಿಗಳನ್ನು ಸಾಯಿಸಿದ್ದಾರೆ ಎಂಬ ವದಂತಿ ಹಬ್ಬಿಸಲು ಮುಂದಾಗಿದ್ದು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇದು ಯಾವುದೇ ಕಾಯಿಲೆಗೆ ಸಂಬಂಧಪಟ್ಟದ್ದಲ್ಲ ಎಂದು ಖಚಿತಪಡಿಸಿದ್ದಾರೆ.
ಕೋಳಿ ಮರಿಗಳಲ್ಲಿ ಕರೊನಾ ಅಥವಾ ಯಾವುದೇ ಸೋಂಕು ಇಲ್ಲ. ಕಂಪನಿ ಹಾಗೂ ರೈತ ಸೇರಿ ತನ್ನ ಮುಂದಿನ ದಿನಗಳಲ್ಲಿ ಆಗುವ ನಷ್ಟವನ್ನು ತಪ್ಪಿಸಲು ಹೀಗೆ ಮಾಡಿದ್ದಾರೆ. ಜಗದೀಶ್ ಕುಮಾರ್, ಉಪನಿರ್ದೇಶಕ, ಪಶು ಸಂಗೋಪನಾ ಇಲಾಖೆ ಕೋಲಾರ