ಕಾಡಾನೆ ದಾಳಿಯಿಂದಾದ ಬೆಳೆ ಹಾನಿಗೆ ಶೀಘ್ರ ಪರಿಹಾರ

18 budikote 01
Published on

ಬೂದಿಕೋಟೆ: ತಮಿಳುನಾಡು ಗಡಿಭಾಗದ ಗ್ರಾಮಗಳಲ್ಲಿ ಕಾಡಾನೆ ದಾಳಿಗೆ ನಾಶವಾಗಿರುವ ರೈತರ ಬೆಳೆಗೆ ಸೂಕ್ತ ಪರಿಹಾರ ನೀಡುವ ಜತೆಗೆ ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್. ವೆಂಕಟೇಶ್ ಭರವಸೆ ನೀಡಿದರು.

ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿ ರೈತರ ಜಮೀನಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಆನೆ ದಾಳಿಯಿಂದ ಗಡಿಭಾಗದ ಜನರು ಭಯಭೀತರಾಗಿದ್ದಾರೆ. ಆದ್ದರಿಂದ ಜಿಪಂನ 30 ಸದಸ್ಯರು ಹಾಗೂ ಅಧಿಕಾರಿಗಳು ಬೆಳೆ ವೀಕ್ಷಣೆ ಮಾಡಿದ್ದೇವೆ. ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಸಿಗದಿರುವುದರಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಗ್ರಾಮದೊಳಗೆ ಸೇರಿಸದ ಸ್ಥಿತಿ ನಿರ್ಮಾಣವಾಗಿದೆ. ವಿಶೇಷ ತಂಡದೊಂದಿಗೆ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಬರವಸೆ ನೀಡಿದ್ದಾರೆ. ಜತೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಅಲ್ಲದೆ, ಕಳೆದ ವರ್ಷದಿಂದ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳಿವೆ. ಕೂಡಲೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಆನೆಗಳನ್ನು ಓಡಿಸಲು ಬರುವುದಿಲ್ಲ. ಬೆಳೆ ಹಾನಿ ಬಗ್ಗೆ ಹೇಳಿದರೆ ತಂಬಾಕು ಬೆಳೆಯಿರಿ ಎನ್ನುತ್ತಾರೆ. ಅಲ್ಲದೆ, ರೈತರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಿಸಬೇಕು ಎಂದು ಗ್ರಾಮಸ್ಥರು ದೂರು ನೀಡಿದರು.

ಅರಣ್ಯ ಇಲಾಖೆ ಡಿಸಿಎಫ್ ಚಕ್ರಪಾಣಿ ಮಾತನಾಡಿ, ಕಳೆದ ಮೂರು ವರ್ಷದಿಂದ ಆನೆಗಳು ಬೆಳಗಳ ಮೇಲೆ ದಾಳಿ ಮಾಡುತ್ತಿವೆ. ಸಿಬ್ಬಂದಿ ಎಷ್ಟೇ ಓಡಿಸಿದರೂ ಮತ್ತೆ ಬರುತ್ತಿದೆ. ಆದ್ದರಿಂದ ಬೆಳೆ ಪಾರಿಹಾರಕ್ಕೆ ಮತ್ತುಷ್ಟು ಬೆಳೆ ಸೇರಿಸಲು ಹಾಗೂ ಪರಿಹಾರ ಮೊತ್ತ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗಾಗಲೇ 41 ಲಕ್ಷ ರೂ., ಪರಿಹಾರವನ್ನು ರೈತರಿಗೆ ನೀಡಿದ್ದೇವೆ. ಬಾಕಿ ಇರುವ ರೈತರಿಗೆ ಮಾರ್ಚ್‌ನೊಳಗೆ ಪರಿಹಾರ ನೀಡಲಾಗುವುದು. ಕಾಡು ಮತ್ತು ಗ್ರಾಮಗಳ ಅಂಚಿನಲ್ಲಿ ಆನೆಗಳ ಶಿಬಿರ ತೆರೆಯಲು ಯೋಜನೆ ರೂಪಿಸಲಾಗುವುದು, ಮತ್ತು ರೈಲ್ವೆ ಬ್ಯಾರಿಗೇಡ್ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದರು.

ಜಿಪಂ ಉಪಾಧ್ಯಕ್ಷೆ ಯಶೋದಮ್ಮ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಮಂಜುನಾಥ್, ಇಒ ವೆಂಕಟೇಶ್ ಸದಸ್ಯರಾದ ಪಾರ್ವತಮ್ಮ ನಾಗರಾಜ್, ಕೃಷ್ಣಪ್ಪ, ಅರವಿಂದ್, ಅರುಣ್, ಮಹೇಶ್, ಶ್ರೀನಿವಾಸ್, ನಿರ್ಮಲಾಅಮರೇಶ್, ಮಾಲಾ ಶ್ರೀನಾಥ್‌ಗೌಡ, ಅರಣ್ಯ ಇಲಾಖೆ ಪಿಸಿಸಿಎಫ್ ರಂಗಾರಾವ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net