

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪದ ಹಲವು ಗ್ರಾಮಗಳಿಗೆ ಗುರುವಾರ ತಡರಾತ್ರಿ 20ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.
ತಮಿಳುನಾಡು ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದಿದ್ದ ಆನೆಗಳು ಬೂದಿಕೋಟೆ ಹೋಬಳಿಯ ದಿನ್ನಕೊತ್ತೂರು, ಗುಟ್ಟೂರು, ದಿನ್ನೂರು ಸೇರಿ ಹಲವು ಗ್ರಾಮಗಳಿಗೆ ನುಗ್ಗಿದ್ದು, ದಿನ್ನಕೊತ್ತೂರಿನ ರೈತರಾದ ವೆಂಕಟೇಶ್ ರೆಡ್ಡಿ, ಕೃಷ್ಣಾರೆಡ್ಡಿ, ಶಂಕರರೆಡ್ಡಿಗೆ ಸೇರಿದ ರಾಗಿ ಮೆದೆ ತಿಂದಿವೆ. ಅದೇ ಗ್ರಾಮದ ಸೋಮಸುಂದರ್ ರೆಡ್ಡಿ ಅವರ ಬಾಳೆತೋಟ ಮತ್ತು ರಾಗಿ ಮೆದೆ ನಾಶ ಮಾಡಿವೆ. ಗುಟ್ಟೂರು ಗ್ರಾಮದ ರೈತ ನಾರಾಯಣಪ್ಪ ಎಂಬುವರ ಟೊಮ್ಯಾಟೊ ಮತ್ತು ಸೌತೆಕಾಯಿ, ದಿನ್ನೂರಿನ ಚಂದ್ರಪ್ಪ ಅವರ ಆಲೂಗಡ್ಡೆ ಬೆಳೆ ನಾಶ ಮಾಡಿವೆ.
ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸುವ ಪ್ರಯತ್ನ ಮಾಡಿದ್ದಾರೆ. ಇವು ಎರಡು ಗುಂಪುಗಳಾಗಿ ವಿಂಗಡಣೆಯಾಗಿದ್ದು, ಒಂದು ಗುಂಪನ್ನು ಓಡಿಸಿದ್ದು, ಮತ್ತೊಂದು ಗುಂಪು ಸಿಬ್ಬಂದಿ ಕಣ್ಣು ತಪ್ಪಿಸಿ ಓಡಾಡುತ್ತಿವೆ.