

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ತಾಲೂಕಿನ ಬೂದಿಹಾಳ್ ಗ್ರಾಪಂ ಅಧ್ಯಕ್ಷರಾಗಿ ಎಚ್.ಶೈಲಜಾ, ಉಪಾಧ್ಯಕ್ಷರಾಗಿ ಮುನಿರತ್ನ ಆಯ್ಕೆಯಾದರು. 22 ಸದಸ್ಯ ಬಲದ ಪಂಚಾಯಿತಿಯಲ್ಲಿ ನಿಗದಿಯಾಗಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಚ್.ಶೈಲಜಾ 13 ಮತ ಪಡೆದು ವಿಜೇತರಾದರು. ಪ್ರತಿಸ್ಪರ್ಧಿ ಬೂದಿಹಾಲ್ ಡಿ.ಎನ್.ಶೈಲಜಾ 9 ಮತ ಪಡೆದು ಪರಾಭವಗೊಂಡರು. ಬಿಸಿಎಂ(ಎ) ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮುನಿರತ್ನ 13 ಮತ ಪಡೆದುಕೊಂಡು ವಿಜೇತರಾದರು. ಪ್ರತಿಸ್ಪರ್ಧಿ ರತ್ನಮ್ಮ 9 ಮತ ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ಶಿವಕುಮಾರ್ ತಿಳಿಸಿದರು.
10 ವರ್ಷದಿಂದ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಗ್ರಾಪಂ ಆಡಳಿತವನ್ನು ಈ ಬಾರಿ ಜೆಡಿಎಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪೊಲೀಸ್ ಬಿಗಿಬಂದೋಬಸ್ತ್: ಗ್ರಾಪಂ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕ ವಿ.ರಾಜೀವ್ ಹಾಗೂ 15ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂಹೂಡಿದ್ದರು.
ಮಾತಿನ ಚಕಮುಖಿ: ಚುನಾವಣೆಯಲ್ಲಿ ಕೆಲ ಸದಸ್ಯರು ಬೆಂಬಲಿಸುವುದಾಗಿ ಮಾತು ನೀಡಿದ್ದರು. ಆದರೆ ಮತದಾನದ ವೇಳೆ ಹೇಳಿದಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಕೆಲ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಜನತಾ ಮಿತ್ರ ಸಹಕಾರ ಸಂಘದ ನಿರ್ದೇಶಕ ಬೂದಿಹಾಲ್ ತಿರುಮಲೇಗೌಡ, ಮುಖಂಡರಾದ ಮುನ್ನರಾಮೇಗೌಡ, ಬೈಲಪ್ಪ, ದೇಗನಹಳ್ಳಿನಾಗರಾಜು, ಸುರೇಶ್, ಜಯರಾಮ್, ಉಮೇಶ್, ಬಸವರಾಜು, ಹೇಮಂತ್, ಶ್ರೀನಿವಾಸ್, ವೆಂಕಟೇಶ್, ರವಿಕುಮಾರ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.