

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಹೋಬಳಿಯ ಬೂದಿಗೆರೆ ಗ್ರಾಪಂನ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತ ಹಂದರಹಳ್ಳಿಯ ಕೆ.ವರಲಕ್ಷ್ಮೀ, ಉಪಾಧ್ಯಕ್ಷೆಯಾಗಿ ಬೂದಿಗೆರೆಯ ರಿಜ್ವಾನಾ ಅನ್ವರ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಭರತ್ ಘೋಷಿಸಿದರು.
ನೂತನ ಅಧ್ಯಕ್ಷೆ ಕೆ.ವರಲಕ್ಷ್ಮೀ ಮಾತನಾಡಿ, ಪಂಚಾಯಿತಿಯ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಉಪಾಧ್ಯಕ್ಷೆ ರಿಜ್ವಾನಾ ಅನ್ವರ್ ಮಾತನಾಡಿ, ಅಧ್ಯಕ್ಷರೂ ಹಾಗೂ ಸದಸ್ಯರ ಜತೆಗೂಡಿ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಲಾಗುವುದು ಎಂದರು.
ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಡಾ.ಬಿ.ಆರ್.ಅಂಬೆಡ್ಕರ್ ಅವರ ಸಂವಿಧಾನದ ಮೂಲಕ ನೀಡಿದ ಮೀಸಲಾತಿಯಿಂದ ಇಂದು ಎಲ್ಲರಿಗೂ ಅವಕಾಶ ದೊಕುವಂತಾಗಿದೆ. ಎಲ್ಲರ ಸಹಕಾರದೊಂದಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ ಎಂದು ಕಿವಿಮಾತು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ಎಸ್.ಗೀತಾ, ಸದಸ್ಯರಾದ ಚೌಡಪ್ಪ, ಬಿ.ಕೆ.ನಾರಾಯಣಸ್ವಾಮಿ, ಶಂಷದ್, ಮಂಜುಳಾ, ಎಲ್.ಶ್ರೀನಿವಾಸ್, ಎಂ.ವೆಂಕಟೇಶ್, ಎಂ.ರೂಪಾ, ಆರ್.ಲಕ್ಷ್ಮಣಮೂರ್ತಿ, ಆರ್.ಪ್ರಮೀಳಾ, ಟಿ.ಆರತಿ, ಎಸ್.ಮಂಜುನಾಥ್, ಎಂ.ಸಂಜಯಕುಮಾರ್, ಕೆ.ಪದ್ಮಾ, ಎನ್.ಮೋಹನ, ಗಜೇಂದ್ರ, ಎಂ.ರಾಜಶೇಖರ್ ಇದ್ದರು.