ಪ್ರಣಾಳಿಕೆ ಈಡೇರಿಸುವತ್ತ ಬಜೆಟ್ ಚಿತ್ತ: ದತ್ತಾತ್ರಿ

dattatri
ಎಸ್.ದತ್ತಾತ್ರಿ, ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಚಾಲಕ
Published on

ಶಿವಮೊಗ್ಗ: ಲೋಕಸಭೆ ಚುನಾವಣೆ ಬಿಜೆಪಿ ನೀಡಿದ್ದ ಪ್ರಣಾಳಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಸಹಕಾರಿ ಆಗಲಿದೆ. ಪ್ರಣಾಳಿಕೆ ಅಂಶಗಳಿಗೆ ಪೂರಕ ಬಜೆಟ್ ಇದಾಗಿದೆ ಎಂದು ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ ಹೇಳಿದರು.

ವಿಕಸಿತ ಭಾರತ ಪರಿಕಲ್ಪನೆ ನನಸಾಗಲು ಬಜೆಟ್ ಬುನಾದಿಯಾಗಿದೆ. ಸಂಕಲ್ಪ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದ ವಿಚಾರಗಳ ಪೈಕಿ ಶೇ. 60 ರಷ್ಟನ್ನು ಬಜೆಟ್ ಮೂಲಕ ಜಾರಿಗೆ ತರಲಾಗಿದೆ. ವಿಶ್ವದ ಮೂರನೇ ಪ್ರಬಲ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಲು ಇದರಿಂದ ಅನುಕೂಲವಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಜೆಟ್‌ನಲ್ಲಿ ಘೋಷಣೆಯಾದ ಪ್ರಕಾರ 72 ಹೊಸ ಯೋಜನೆಗಳ ಲಾಭ ನಮ್ಮ ರಾಜ್ಯಕ್ಕೆ ಸಿಗಲಿದೆ. ಕಾಂಗ್ರೆಸ್‌ನವರು ವಿನಾಕಾರಣ ಕೇಂದ್ರವನ್ನು ಟೀಕಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಯಾಗದೇ ಇರಲು ಕೆಲ ತಾಂತ್ರಿಕ ತೊಡಕಿದೆ. ಅದನ್ನು ರಾಜ್ಯ ಸರ್ಕಾರ ಸರಿಪಡಿಸಿಕೊಳ್ಳಬೇಕು ಎಂದರು.
ಕೃಷಿ ಕ್ಷೇತ್ರದ ಡಿಜಿಟಲೀಕರಣ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ, ಕೈಗಾರಿಕೆ, ಉತ್ಪಾದನಾ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ. ತೆರಿಗೆ ವ್ಯವಸ್ಥೆಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲಾಗಿದೆ. ನವೋದ್ಯಮಗಳಿಗೆ ಸಾಲ ಸೌಲಭ್ಯ ಹೆಚ್ಚಿಸಲಾಗಿದೆ. ಶಿಕ್ಷಣಕ್ಕೆ ಜಾಮೀನು ರಹಿತ ಸಾಲ ನೀಡಲಾಗುತ್ತದೆ. ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಮುಖರಾದ ಋಷಿಕೇಶ್ ಪೈ, ಕೆ.ವಿ.ಅಣ್ಣಪ್ಪ, ಭವಾನಿರಾವ್ ಮೋರೆ, ಭರತ್ ಶೇಖರ್, ರಮೇಶ್ ಗೌಡ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net