

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ನಗರದ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ವಾರ್ಡ್‌ಗಳಲ್ಲಿ ರಸ್ತೆ, ಫುಟ್‌ಪಾತ್‌ಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ಬಜೆಟ್‌ನಲ್ಲಿ 6.17 ಕೋಟಿ ಮೊತ್ತದ ಯೋಜನೆ, ಬೀದಿದೀಪಗಳ ನಿರ್ವಹಣೆ, ಅಳವಡಿಕೆ ಹಾಗೂ ವಿದ್ಯುತ್ ಮಾರ್ಗಗಳ ವಿಸ್ತರಣೆ ಯೋಜನೆಗಳಿಗೆ 2.63 ಕೋಟಿ ರೂ.ಮೀಸಲು, ಕರಂದಕ್ಕಾಡು-ರೈಲ್ವೆ ಸ್ಟೇಷನ್ ರಸ್ತೆ ಅಭಿವೃದ್ಧಿ ಜತೆಗೆ ರಸ್ತೆ ವಿಭಜಕ ನಿರ್ಮಾಣದೊಂದಿಗೆ ಬೀದಿದೀಪ ಅಳವಡಿಕೆ ಇನ್ನಿತರ ಅಂಶಗಳು ಸೇರಿ ಒಟ್ಟು 629536450 ರೂ.ಆದಾಯ ಮತ್ತು 672467530 ರೂ. ಖರ್ಚು ಅಂದಾಜಿಸಲಾಗಿರುವ ಮಿಗತೆ ಬಜೆಟ್ ಅನ್ನು ನಗರಸಭೆ ಉಪಾಧ್ಯಕ್ಷೆ ಶಂಸಿದಾ ಫಿರೋಜ್ ಮಂಡಿಸಿದರು.
ಕಾಸರಗೋಡು ನಗರ ಸಭಾಂಗಣದಲ್ಲಿ 2025-26ನೇ ಸಾಲಿನ ಆಯವ್ಯಯ ಬಜೆಟ್ ಅಧಿವೇಶನ ನಗರಸಭೆ ಅಧ್ಯಕ್ಷ ಅಬ್ಬಸ್ ಬೀಗಂ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರವಾಸೋದ್ಯಮ ಅಭಿವೃದ್ಧಿ ಅಂಗವಾಗಿ ಕಾಸರಗೋಡಿನ ನೆಲ್ಲಿಕುಂಜೆ ಬೀಚ್‌ನಲ್ಲಿ 1.75ಕೊಟಿ ರೂ.ವೆಚ್ಚದಲ್ಲಿ ಬೀಚ್ ಪಾರ್ಕ್ ಯೋಜನೆಗೆ ಕೇಂದ್ರದ ಅನುಮೋದನೆ ಲಭಿಸಿದ್ದು, ಕೇಂದ್ರ, ರಾಜ್ಯ ಸರ್ಕಾರ ಹಾಗೂ ಕಾಸರಗೋಡು ನಗರಸಭೆ ಜಂಟಿಯಾಗಿ ಯೋಜನೆ ಜಾರಿಗೊಳಿಸಲಿದೆ. ನಗರಸಭೆ ವ್ಯಾಪ್ತಿಯ 49 ಅಂಗನವಾಡಿಗಳಿಗೆ 2024-25ರ ವಾರ್ಷಿಕ ಯೋಜನೆಯಲ್ಲಿ ಮಿಕ್ಸರ್ ಗ್ರೈಂಡರ್, ಕುಕ್ಕರ್, ತೂಕದ ಯಂತ್ರ ಇತ್ಯಾದಿಗಳನ್ನು ನೀಡಲಾಗಿದ್ದು, 2025-26ನೇ ಸಾಲಿನ ಯೋಜನೆಯಲ್ಲಿ ಅಂಗನವಾಡಿ ಮಕ್ಕಳ ಕಲೋತ್ಸವ, ಮಕ್ಕಳಿಗೆ ಸಮವಸ್ತ್ರ ಹಾಗೂ ಬ್ಯಾಗ್, ಅಂಗನವಾಡಿಗಳಲ್ಲಿ ಎಸಿ ಅಳವಡಿಕೆ ಇತ್ಯಾದಿ ಕಾರ್ಯಕ್ರಮಗಳಿಗೆ 74 ಲಕ್ಷ ರೂ.ಮೀಸಲಿಡಲಾಗಿದೆ.
ಪಶು ಸಂಗೋಪನೆ, ಮಹಿಳಾ ಅಭಿವೃದ್ಧಿ, ಕುಟುಂಬಶ್ರೀ, ಶಿಕ್ಷಣ, ಕ್ರೀಡೆ, ಆರೋಗ್ಯ, ಕಲೆ ಮತ್ತು ಸಂಸ್ಕೃತಿ, ವಿಕಲಚೇತನರ ಕಲ್ಯಾಣ, ಸಣ್ಣ ಕೈಗಾರಿಕೆಗಳು, ಅಯ್ಯಂಕಾಳಿ ಉದ್ಯೋಗ ಖಾತ್ರಿ ಯೋಜನೆ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡ, ಮೀನುಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗೆ ವಿವಿಧ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಹಲವು ಕ್ಷೇತ್ರಗಳಿಗೆ ಮೀಸಲು
ಕೃಷಿ ವಲಯ ಉತ್ತೇಜಿಸುವ ಉದ್ದೇಶದಿಂದ ತೆಂಗು ಹಾಗೂ ಅಡಕೆ ಕೃಷಿಗೆ ಸಾವಯವ ಗೊಬ್ಬರ, ಬಾಳೆ ಕೃಷಿ, ಭತ್ತದ ಕೃಷಿ ಕೂಲಿ ವೆಚ್ಚ ಮತ್ತು ತರಕಾರಿ ಕೃಷಿ ಅಭಿವೃದ್ಧಿ ಯೋಜನೆಗಳಿಗೆ 47ಲಕ್ಷ ರೂ. ಮೀಸಲಿಡಲಾಗಿದೆ. ಶಿಕ್ಷಣ ವಲಯಕ್ಕೆ 1.7ಕೋಟಿ ರೂ.ಮಹಿಳಾ ಕಲ್ಯಾಣಕ್ಕೆ 50ಲಕ್ಷ ರೂ. ಮಾಲಿನ್ಯ ನಿರ್ಮೂಲನೆ, ಶುಚೀಕರಣ ಕಾರ್ಯಗಳಿಗೆ 3.5ಕೋಟಿ, ಪಿಎಂಎವೈ ಯೋಜನೆಗೆ 2.32ಕೋಟಿ ರೂ.ಮೀಸಲಿಡಲಾಗಿದೆ.