ಬಜೆಟ್‌ನಲ್ಲಿ ಮೀಸಲಿಡಿ ಪ್ರತ್ಯೇಕ ಅನುದಾನ: ಕೊಪ್ಪಳದಲ್ಲಿ ದೇವದಾಸಿಯರ ವಿಮೋಚನಾ ಸಂಘ ಪ್ರತಿಭಟನೆ

310122 Koppal Devadasi's Protest
ಕೊಪ್ಪಳದಲ್ಲಿ ದೇವದಾಸಿಯರ ವಿಮೋಚನಾ ಸಂಘದ ತಾಲೂಕು ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
Published on

ಕೊಪ್ಪಳ: ರಾಜ್ಯದಲ್ಲಿ ವಿಮುಕ್ತ ದೇವದಾಸಿಯರ ಗಣತಿ ನಡೆಸಿ, ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿಯರ ವಿಮೋಚನಾ ಸಂಘದ ತಾಲೂಕು ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅನಿಷ್ಟ ಪದ್ಧತಿ ನಿಷೇಧಿಸಿದ್ದರೂ ಕೆಲವೆಡೆ ಮಂದುವರಿದಿದೆ. ಅಮಾಯಕರು, ಯಾವುದೋ ಒತ್ತಡಕ್ಕೆ ಒಳಗಾಗುವವರು ಈ ಪದ್ಧತಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಬೆತ್ತಲೆ ಸೇವೆ, ಶಿಡಿಯಾಡುವುದು ಸೇರಿ ಇತರ ಪದ್ಧತಿಗಳು ಗುಟ್ಟಾಗಿ ನಡೆಯುತ್ತಿವೆ. ವಿಮುಕ್ತ ದೇವದಾಸಿಯರ ಅಭಿವೃದ್ಧಿಗೆ ಹಲವು ಯೋಜನೆಗಳಿದ್ದರೂ, ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ದೂರಿದರು.

ಗಣತಿ ಮಾಡಬೇಕು. ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಅಳವಡಿಸಬೇಕು. ಪುನರ್ವಸತಿ ಯೋಜನೆಗಳನ್ನು ವಿಸ್ತರಿಸಬೇಕು. ಮಾಸಾಶನ ಮೊತ್ತ 5 ಸಾವಿರ ರೂ.ಗೆ ಹೆಚ್ಚಿಸಬೇಕು. ದೇವದಾಸಿಯರ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡಬೇಕು. ಜೀವನ ನಡೆಸಲು 5 ಎಕರೆ ಜಮೀನು, ವಾಸಕ್ಕೆ ಮನೆ ನಿರ್ಮಿಸಿಕೊಡಬೇಕು. ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನಕಾರರಾದ ಸುಂಕಪ್ಪ ಗದಗ, ಗಾಳೆಮ್ಮ ಗುಂಡಪ್ಪನವರ್, ಹುಚ್ಚಮ್ಮ ಹೊಸಳ್ಳಿ, ಶಂಕ್ರಮ್ಮ, ಗಂಗಮ್ಮ ಪೂಜಾರ, ನಾರಾಯಣಮ್ಮ, ಮರಿಯಮ್ಮ, ಫಕೀರವ್ವ ಲಾಚನಕೇರಿ, ಮರಿಯಮ್ಮ ಗಬ್ಬೂರು, ಸಂಗಮ್ಮ ಕರ್ಕಿಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net