5.40 ಲಕ್ಷ ರೂ. ಉಳಿತಾಯ ಬಜೆಟ್

28 hrr
Published on

ಹರಿಹರ: ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ 2025-26ನೇ ಸಾಲಿನ 5.40 ಲಕ್ಷ ರೂ. ಉಳಿತಾಯ ಆಯವ್ಯಯವನ್ನು ಮಂಡಿಸಿದರು.

ಈ ವೇಳೆ ಮಾತನಾಡಿದ ಕವಿತಾ, ವಿವಿಧ ಮೂಲಗಳಿಂದ 59.25 ಕೋಟಿ ಆದಾಯ ನಿರೀಕ್ಷೆ ಮಾಡಿದ್ದು, ನೌಕರರ ವೇತನ ಹಾಗೂ ಇತರೆ ವೆಚ್ಚಗಳಿಗೆ 59.19 ಕೋಟಿ ವ್ಯಯ ಮಾಡುವ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದರು.

ಶಂಕರ್ ಮಾತನಾಡಿ, ನಗರವನ್ನು ಪ್ರವಾಸಿ ತಾಣವಾಗಿ ಮಾಡಬೇಕಿರುವುದು ನಗರಸಭೆಯ ಕರ್ತವ್ಯ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ. ಕೇವಲ ದಾಖಲೆಗೆ ಬಜೆಟ್ ಸೀಮಿತವಾಗದೆ ಕಾರ್ಯರೂಪಕ್ಕೆ ತರುವಂತಾಗಲಿ ಎಂದರು.

ವಾಮನಮೂರ್ತಿ ಮಾತನಾಡಿ, ಅಧ್ಯಕ್ಷರು ಉತ್ತಮ ಆಯವ್ಯಯವನ್ನು ಮಂಡಿಸಿದ್ದು, ಇದು ಕೇವಲ ಪುಸ್ತಕಕ್ಕೆ ಸೀಮಿತವಾಗದೆ ನಾಳೆಯಿಂದಲೇ ಕಾರ್ಯರೂಪಕ್ಕೆ ಬಂದರೆ ಒಂದು ಅರ್ಥ ಬರುತ್ತದೆ ಎಂದು ಸಲಹೆ ನೀಡಿದರು.

ದಾದಾ ಖಲಂದರ್ ಮಾತನಾಡಿ, ಪೌರಾಯುಕ್ತರು ಸಿದ್ಧಪಡಿಸಿದ್ದ ಬಜೆಟ್​ನ್ನು ಅಧ್ಯಕ್ಷರು ಮಂಡಿಸಿದ್ದಾರೆ. 2024-25 ನೇ ಸಾಲಿನ 15ನೇ ಹಣಕಾಸಿನ ಅನುದಾನವನ್ನೇ ಇನ್ನೂ ಬಳಕೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ಸಭೆಯಿಂದ ಹೊರ ನಡೆದರು.

ಅಶ್ವಿನಿ ಕೃಷ್ಣ ಮಾತನಾಡಿ, ಬೆಸ್ಕಾಂಗೆ ನೀಡಬೇಕಾದ ಹಣವನ್ನು ಇನ್ನೂ ನೀಡಿಲ್ಲ. ಯಾವ ರೀತಿ ಉಳಿತಾಯ ಬಜೆಟ್ ಮಂಡಿಸುತ್ತಿರಾ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷೆ, ನಗರದ ಸರ್ವತೋಮುಖ ಅಭಿವೃದ್ಧಿ ಮಾಡಬೇಕೆನ್ನುವ ಅಭಿಲಾಷೆ ಇದೆ. ಆದರೆ ಹಿರಿಯ ಸದಸ್ಯರು ಸೇರಿ ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ಅಧಿಕಾರಕ್ಕೆ ಬಂದು 6 ತಿಂಗಳಾದರೂ ಪೌರಾಯುಕ್ತರು ನನ್ನ ಬಳಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇಲ್ಲಿ ಐದು ವರ್ಷ ಮೇಲ್ಪಟ್ಟು ಕರ್ತವ್ಯ ನಿರ್ವಹಿಸಿದವರ ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ, ಉಪಾಧ್ಯಕ್ಷ ಎಂ. ಜಂಭಣ್ಣ, ಸದಸ್ಯರಾದ ಬಾಬುಲಾಲ್, ಎಸ್.ಎಂ. ವಸಂತ್, ಆಟೋ ಹನುಮಂತಪ್ಪ, ಕೆ.ಜಿ. ಸಿದ್ದೇಶ್, ಸೈಯದ್ ಆಲೀಂ, ಆರ್.ಸಿ. ಜಾವೀದ್, ಬಿ. ಆಲ್ತಾಫ್, ಅಶ್ವಿನಿ ಕೃಷ್ಣ, ಸುಮಿತ್ರಮ್ಮ ಮರಿದೇವ, ನಿಂಬಕ್ಕ ಚಂದಾಪೂರ, ಶಾಹಿನಾಬಾನು, ರತ್ನ ಉಜ್ಜೇಶ್, ಲಕ್ಷ್ಮೀ ಮೋಹನ್, ಕೆ.ಬಿ. ರಾಜಶೇಖರ್, ಸಂತೋಷ್ ದೊಡ್ಮನಿ ಹಾಗೂ ಇತರರಿದ್ದರು

ಆದಾಯ ಮೂಲಗಳು: ಎಸ್​ಎಫ್​ಸಿ ವೇತನ ಅನುದಾನ 10.50 ಕೋಟಿ ರೂ., ಬೀದಿದೀಪ ವಿದ್ಯುತ್ ಬಿಲ್ 8 ಕೋಟಿ ರೂ., ಆಸ್ತಿ ತೆರಿಗೆ 6.50 ಕೋಟಿ ರೂ., ನೀರಿನ ತೆರಿಗೆ 4.25 ಕೋಟಿ ರೂ, 15ನೇ ಹಣಕಾಸು ಆಯೋಗ 5.50 ಕೋಟಿ ರೂ, ಎಸ್​ಎಫ್​ಸಿ ವಿಶೇಷ 5.50 ಕೋಟಿ ರೂ, ಘನತ್ಯಾಜ್ಯ ನಿರ್ವಹಣೆಗೆ 2 ಕೋಟಿ ರೂ, ಎಸ್​ಎಫ್​ಸಿ ಮುಕ್ತನಿಧಿ 1.50 ಕೋಟಿ ರೂ, ನಲ್ಮ್ ಯೋಜನೆ 50 ಲಕ್ಷ ರೂ, ಖಾತಾ ಬದಲಾವಣೆ ಶುಲ್ಕ 25 ಲಕ್ಷ ರೂ.

ಖರ್ಚಿನ ಬಾಬ್ತುಗಳು: ನೌಕರರ ವೇತನ 10.50 ಕೋಟಿ ರೂ, ರಾಜನಹಳ್ಳಿ/ಮಾಕನೂರು ಬಳಿ ಕುಡಿಯುವ ನೀರು ಸಂಗ್ರಹಕ್ಕೆ ಜಮೀನು ಖರೀದಿ 2.50 ಕೋಟಿ ರೂ, ಹೊರಗುತ್ತಿಗೆ ನೌಕರರ ವೇತನ 1.75 ಕೋಟಿ ರೂ, ಪಾರ್ಕ್​ಗಳ ಅಭಿವೃದ್ಧಿ 1 ಕೋಟಿ ರೂ, ಎಲ್ಲ ವಾರ್ಡಗಳಲ್ಲಿ ರಸ್ತೆಗಳಿಗೆ ನಾಮಫಲಕ ಅಳವಡಿಕೆ 31 ಲಕ್ಷ ರೂ, ನಗರದ ನಾಲ್ಕು ದಿಕ್ಕಿನಲ್ಲಿ ಸ್ವಾಗತ ಕಮಾನು ನಿರ್ಮಾಣ 50 ಲಕ್ಷ ರೂ, ರಸ್ತೆ, ಚರಂಡಿ, ಸೇತುವೆ ನಿರ್ವಣಕ್ಕೆ 9 ಕೋಟಿ ರೂ, ಘನತ್ಯಾಜ್ಯ ನಿರ್ವಹಣೆ 2.50 ಕೋಟಿ ರೂ, ಫುಟ್​ಪಾತ್ ನಿರ್ಮಾಣ 1 ಕೋಟಿ ರೂ, ಬೀದಿದೀಪದ ವಿದ್ಯುತ್ ಬಿಲ್ 3.20 ಕೋಟಿ ರೂ, ಕುಡಿಯುವ ನೀರಿನ ವಿದ್ಯುತ್ ಬಿಲ್ 4.80 ಕೋಟಿ ರೂ, ಗಾಂಧಿ ವೃತ್ತ ಅಭಿವೃದ್ಧಿ 25 ಲಕ್ಷ ರೂ.

ಪ್ರಮುಖ ಯೋಜನೆಗಳು: ನಗರದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ನಿವೇಶನ ನೀಡುವುದು, ಪರಿಸರ ಸ್ನೇಹಿ ಅಂಗನವಾಡಿ ಕೇಂದ್ರ, ಅಮೃತ್ ಸ್ಟಾಲ್, ಪ್ರವಾಸೋದ್ಯಮಕ್ಕೆ ಆದ್ಯತೆ, ಫುಡ್ ಕೋರ್ಟ್ ಅಥವಾ ಫುಡ್ ಸ್ಟ್ರೀಟ್, ಗೋಡೆ ಬರಹ ಇವು ಈ ಬಾರಿಯ ಆಯವ್ಯಯದಲ್ಲಿ ಘೊಷಿಸಿದ ಪ್ರಮುಖ ಅಂಶಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net