ಬಳ್ಳಾರಿ : ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ )ದ ವಿರುದ್ಧ ಭ್ರಷ್ಟಾಚಾರ ಆರೋಪ ಹೊತ್ತ ಒಂಬತ್ತು ತಿಂಗಳ ಬಳಿಕ ನಿಗದಿಯಾಗಿದ್ದ ಸಾಮಾನ್ಯ ಹಾಗೂ ಬಜೆಟ್ ಸಭೆಯನ್ನು ಮುಂದೂಡುವ ಮೂಲಕ ಮತ್ತೋಮ್ಮೆ ವಿವಿಧ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
ಕಳೆದ ವರ್ಷ ಮಾರ್ಚ್ ಹಾಗೂ ಜೂನ್ ತಿಂಗಳಲ್ಲಿ ನಡೆದಿದ್ದ ಎರಡು ಸಭೆಯಲ್ಲಿ ಕೈಗೊಂಡ ನಡಾವಳಿಗಳು, ಬಡಾವಣೆ ರಚನೆಯಲ್ಲಿ ಕಿಕ್‌ಬ್ಯಾಕ್, ನಿಯಮಬಾಹಿರವಾಗಿ ಸೈಟು ಹಂಚಿಕೆ ಸೇರಿದಂತೆ ಹಲವು ಕಾರಣಕ್ಕೆ ಬುಡಾ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿಕೊಂಡಿದೆ ಎಂದು ಜಿಲ್ಲೆಯ ಇಬ್ಬರು ಶಾಸಕರು ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು ವಿರುದ್ಧ ಸರ್ಕಾರ ಪತ್ರ ಬರೆದು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಆದ್ದರಿಂದ, ಸದ್ಯ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ತಂಡ ಬುಡಾ ವಿರುದ್ಧ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ವರದಿಯಲ್ಲಿ ಏನಿದೆ : ಕಳೆದ ವರ್ಷ 07.03.24 ಹಾಗೂ 08.07.24 ರಂದು ನಡೆದ ಎರಡು ಸಭೆಯಲ್ಲಿ ನಗರದ ವಿವಿಧ ಕಾಮಗಾರಿಗಳ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿತ್ತು. ಆದರೆ, ಸಭೆಯಲ್ಲಿ ಅನುಮೋದನೆ ಪಡೆದಿದ್ದ ಹಲವು ವಿಷಯಗಳಿಗೆ ಟಿಪ್ಪಣಿಯ ಇರಲಿಲ್ಲ. ಅಂದರೆ, ಯಾವುದೇ ಕಾಮಗಾರಿಯ ಆರಂಭಿಸುವ ಮುನ್ನ ಅದರ ವಸ್ತು ಸ್ಥಿತಿ, ಅಂದಾಜು ಮೊತ್ತ, ಏನೆಲ್ಲ ಅಳವಡಿಕೆ ಹಾಗೂ ಯಾವ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ ಎಂಬ ಅಂಶಗಳ ಟಿಪ್ಪಣಿ ಇಲ್ಲ ಎಂಬುದಾಗಿ ವರದಿಯಲ್ಲಿ ಸೂಚಿಸಿದೆ. ಮುಖ್ಯವಾಗಿ ಕಳೆದ ವರ್ಷಎರಡು ಸಭೆಯಲ್ಲಿ ವಿಷಯವಾರು ಟಿಪ್ಪಣಿಯಿಲ್ಲದೆ ಅನುಮೋದನೆ ಪಡೆಯಲಾಗಿದ್ದರಿಂದ ಆ ಎರಡು ಸಭೆಯಲ್ಲಿನ ವಿಷಯಗಳ ನ್ಯೂನತೆ ಸರಿಪಡಿಸಿಕೊಂಡು ವರದಿ ಸಲ್ಲಿಸಿ ಎಂದು ಸರ್ಕಾರ ಬುಡಾ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ, ವಿಷಯವಾರು ಟಿಪ್ಪಣಿಯಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಕೂಡ ಆದೇಶಿಸಿದೆ ಎಂದು ಬುಡಾ ಕಚೇರಿಯ ಹಿರಿಯ ಅಧಿಕಾರಿ ತಿಳಿಸಿದರು.
ಸಭೆ ಮುಂದೂಡಿಕೆ : ಕಳೆದ ಒಂಬತ್ತು ತಿಂಗಳ ಬಳಿಕ ನಿಗದಿಯಾಗಿದ್ದ ಬುಡಾ ಸಾಮಾನ್ಯ ಹಾಗೂ ಬಜೆಟ್ ಸಭೆಯನ್ನು ಮುಂದೂಡಲು ಮುಖ್ಯ ಕಾರಣ ರಾಜಕೀಯ ಪ್ರತಿಷ್ಠೆಯಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಕಡೆ ಗಮನಹರಿಸುತ್ತಿಲ್ಲ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಆದ್ದರಿಂದ, ಜಿಲ್ಲೆಯ ಶಾಸಕರೊಬ್ಬರು ಬುಡಾದ ನಿರ್ವಹಣೆ ಮಾಡಲು ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೆ, ಕೆಲವೊಂದು ಕಾಮಗಾರಿಗಳನ್ನು ತಮಗೆ ಸಂಬಂಧಿಸಿದವರಿಗೆ ಗುತ್ತಿಗೆ ನೀಡಲು ಕಸರ‌್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಹಾಲಿ ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು ಡಿಸಿಎಂ ಡಿ.ಕೆ.ಶಿವಕುಮಾರ ಅಪ್ತ ಎನಿಸಿಕೊಂಡಿರುವ ಕಾರಣದಿಂದ ನೇರವಾಗಿ ಅಧ್ಯಕ್ಷರ ಜತೆಗೆ ವೈಮನಸ್ಸು ಬೆಳೆಸಿಕೊಂಡರೆ ಭವಿಷ್ಯದಲ್ಲಿ ರಾಜಕೀಯವಾಗಿ ಏಟು ಬೀಳಬಹುದು ಎಂಬ ಉದ್ದೇಶದಿಂದ ವಿವಿಧ ಕಾರಣಗಳಿಂದ ಸಭೆಗಳನ್ನು ಮುಂದೂಡಿ ಅಭಿವೃದ್ಧಿ ನಗರದ ಕಾಮಗಾರಿಗಳನ್ನು ನೆನೆಗುದಿಗೆ ತಂದು ಅಧ್ಯಕ್ಷರ ವೈಫಲ್ಯತೆಯನ್ನು ಸರ್ಕಾರದ ಮುಂದೆ ಎತ್ತಿ ತೋರಿಸಿ ಹೊಸ ಅಧ್ಯಕ್ಷರ ಬದಲಾವಣೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿದವು. ಒಟ್ಟಾರೆ ಏನೇ ಇರಲಿ ಕೆಲವೇ ಕಳೆದ ಒಂದು ವರ್ಷದಿಂದ ಬುಡಾದಿಂದ ಒಂದು ಅಭಿವೃದ್ದಿ ಕಾಮಗಾರಿಗಳ್ಳದೆ ಸಾರ್ವಜನಿಕರು ಕಷ್ಟಪಡುವಂತೆಯಾಗಿದೆ. ರಾಜಕೀಯ ಪ್ರತಿಷ್ಠೆಯನ್ನು ಬದಿಗಿಟ್ಟು ಅಭಿವೃದ್ಧಿ ಕಡೆ ಗಮನಹರಿಸಲಿ ಎಂಬುದು ಜನರ ಅಭಿಪ್ರಾಯವಾಗಿದೆ.
ಕೋಟ್... ಈ ತಿಂಗಳು ಮಾ.5ರಂದು ನಡೆಯಬೇಕಿದ್ದ ಸಾಮಾನ್ಯ ಹಾಗೂ ಬಜೆಟ್ ಸಭೆಯನ್ನು ಆಧಿವೇಶನ ನಡೆಯುತ್ತಿರುವುದರಿಂದ ಮುಂದೂಡಲಾಗಿದೆ. ಆಧಿವೇಶನ ಮುಗಿದ ಬಳಿಕ ಜಿಲ್ಲೆಯ ಶಾಸಕರ, ಸದಸ್ಯರ ಹಾಗೂ ಬುಡಾ ಅಧ್ಯಕ್ಷರ ನೇತೃತ್ವದಲ್ಲೇ ಸಭೆ ನಡೆಸಲಾಗುವುದು.
- ನಂಜೇಗೌಡ, ಉಸ್ತುವಾರಿ ಆಯುಕ್ತ, ಬುಡಾ, ಬಳ್ಳಾರಿ.