

ಮಡಿಕೇರಿ:
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ಉತ್ತಮ ಬಜೆಟ್, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ಪೂರಕ ಬಜೆಟ್ ಇದಾಗಿದೆ ಎಂದು ಒಂದು ವಲಯದಿಂದ ಶ್ಲಾಘನೆ ವ್ಯಕ್ತವಾಗಿದ್ದರೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಯಾವುದೇ ವಿಷಯಗಳು ಬಜೆಟ್‌ನಲ್ಲಿ ಪ್ರಸ್ತಾಪ ಆಗಿಲ್ಲ. ವಿಶೇಷವಾಗಿ ಕೊಡಗಿನ ಸಮಸ್ಯೆಗಳ ಕಡೆಗೆ ಗಮನ ಹರಿಸಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದೆ.
ರಾಜ್ಯದಲ್ಲಿ ಶೈಕ್ಷಣಿಕ, ಆರೋಗ್ಯ, ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕೆ ಒತ್ತು ನೀಡಿರುವುದನ್ನು ಸ್ವಾಗತಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಅನುದಾನ ಮಿಸಲಿಟ್ಟಿರುವುದು, ಮಹಿಳಾ ಕಾಲೇಜು ಸ್ಥಾಪನೆ ಮಾಡುವ ಮೂಲಕ ಮಹಿಳಾ ಅಭಿವೃದ್ಧಿಗೆ ಪ್ರೋತ್ಸಾಹಿಸಿರುವುದನ್ನು ಸ್ವಾಗತಿಸಲಾಗಿದೆ. ಕೊಡಗಿನ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಯಾವ ಚಿಂತನೆಯೂ ಇಲ್ಲ. ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಮಧ್ಯಂತರ ಬಜೆಟ್‌ನಲ್ಲಿ ಹಣ ಒದಗಿಸುವಂತೆ ನೋಡಿಕೊಳ್ಳಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ.
ಮಹಿಳೆಯರ ಗ್ಯಾರೆಂಟಿ ಯೋಜನೆಗೆ 28,608 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇಂಥ ಬಜೆಟ್ ಕಾಂಗ್ರೆಸ್ ಪಕ್ಷದಿಂದ ಮಾತ್ರ ನಿರೀಕ್ಷೆ ಮಾಡಲು ಸಾಧ್ಯ ಎನ್ನುವ ಆಭಿಮಾನದ ಮಾತುಗಳನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಶುಕ್ರವಾರ ಮಂಡನೆ ಆದ ರಾಜ್ಯ ಬಜೆಟ್ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊAಡ ಅಭಿಪ್ರಾಯಗಳು ಇಲ್ಲಿದೆ.
ರಾಜ್ಯದಲ್ಲಿ ಶೈಕ್ಷಣಿಕ, ಆರೋಗ್ಯ, ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕೆ ಒತ್ತು ನೀಡಿರುವುದು ಸ್ವಾಗತಾರ್ಹ. ನಿವೇಶನ ರಹಿತರಿಗೆ ಹಾಗೂ ಪ್ರವಾಹ ಸಂತ್ರಸ್ತರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ಮಧ್ಯಮ ವರ್ಗದ ಬಜೆಟ್.
ಕೆ.ವಿ. ಸುನಿಲ್, ಜಿಲ್ಲಾ ಕಾರ್ಯದರ್ಶಿ, ಸಿಪಿಐ
ಜನಸಾಮಾನ್ಯರಿಗೆ ಉತ್ತಮ ಬಜೆಟ್. ಗ್ಯಾರಂಟಿ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಬದುಕು ಸಾಗಿಸಲು ಉತ್ತೇಜನ ಕಲ್ಪಿಸಲಾಗಿದೆ, ವಿದ್ಯಾರ್ಥಿಗಳಿಗೆ ಉತ್ತಮ ಬಜೆಟ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಅನುದಾನ ಮಿಸಲಿಟ್ಟಿದ್ದಾರೆ, ಮಹಿಳಾ ಕಾಲೇಜು ಸ್ಥಾಪನೆ ಮಾಡುವ ಮೂಲಕ ಮಹಿಳಾ ಅಭಿವೃದ್ಧಿಗೆ ಪ್ರೋತ್ಸಾಹಿಸಲಾಗಿದೆ. ಒಟ್ಟಾರೆ ಉತ್ತಮ ಬಜೆಟ್.
ರೇಣುಕಾ ಮೇದಪ್ಪ, ಅಧ್ಯಕ್ಷೆ, ಗ್ರಾಮ ಪಂಚಾಯತ್, ಬ್ಯಾಡಗೊಟ್ಟ
ಕೃಷಿ ಮತ್ತು ತೋಟಗಾರಿಕೆಗೆ ಆದ್ಯತೆ ಕೊಡಲಾಗಿದೆ. ಪಶು ಸಂಗೋಪನೆ ಮತ್ತು ಮೀನುಗಾರಿಕೆಯನ್ನು ಕಡೆಗಣಿಸಿಲ್ಲ. ಸರ್ಕಾರಿ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಪ್ರೋತ್ಸಾಹಧನ 2 ಸಾವಿರ ರೂ.ಗೆ ಏರಿಸಿರುವುದು ಸ್ವಾಗತಾರ್ಹ. ಅನ್ನ ಸುವಿಧಾ ಯೋಜನೆ ಅಡಿಯಲ್ಲಿ 80 ವರ್ಷ ಮೇಲ್ಪಟ್ಟ 2 ಲಕ್ಷ ಫಲಾನುಭವಿಗಳಿಗೆ ಮನೆಗೇ ಸೇವೆ ಉತ್ತಮ ಯೋಜನೆ. ಹೀಗೆ ಒಳ್ಳೆಯ ಬಜೆಟ್ ಕೊಡಲಾಗಿದೆ.
ಸುಧಾ ಈರೇಶ್, ಅಧ್ಯಕ್ಷೆ, ಗ್ರಾಮ ಪಂಚಾಯತ್, ಹಂಡ್ಲಿ.
ಇದೊಂದು ನಿರಾಶಾದಾಯಕ ಬಜೆಟ್. ಕೊಡಗಿನ ಏಳಿಗೆಗೆ ಯಾವುದೇ ತರಹದ ಪೂರಕವಾದ ಹಣ ಇಟ್ಟಿಲ್ಲ. ಕೊಡಗಿನ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಯಾವ ಚಿಂತನೆಯೂ ಇಲ್ಲ. ಇನ್ನು ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಮಧ್ಯಂತರ ಬಜೆಟ್‌ನಲ್ಲಿ ಹಣ ಒದಗಿಸುವಂತೆ ನೋಡಿಕೊಳ್ಳಬೇಕು. ಮುಖ್ಯಮಂತ್ರಿ ಕೊಡಗಿಗೆ ಬಂದು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಡವ ಅಭಿವೃದ್ಧಿ ನಿಗಮದ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ.
ಕರವಂಡ ಅಪ್ಪಣ್ಣ, ಜಿಲ್ಲಾ ಸದಸ್ಯ, ಬಿಜೆಪಿ ಸಾಮಾಜಿಕ ಜಾಲತಾಣ, ಕೊಡಗು
ಜನಪರ, ಮಹಿಳಾಪರ, ರೈತಪರ, ಬಡವರು, ಶೋಷಿತರ ಪರ ಬಜೆಟ್ ಇದಾಗಿದೆ. ಶಿಕ್ಷಣ ಕ್ಷೇತ್ರಕ್ಕೆ 45,286 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ, ಬಿಸಿಯೂಟ ಕಾರ್ಯಕರ್ತೆಯರಿಗೆ, ಅತಿಥಿ ಶಿಕ್ಷಕರಿಗೆ, ಆಶಾ ಕಾರ್ಯರ್ತೆಯರಿಗೆ ಗೌರವಧನ ಹೆಚ್ಚಿಸಲಾಗಿದೆ. ಮಹಿಳೆಯರ ಗ್ಯಾರೆಂಟಿ ಯೋಜನೆಗೆ 28,608 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇಂಥ ಬಜೆಟ್ ಕಾಂಗ್ರೆಸ್ ಪಕ್ಷದಿಂದ ಮಾತ್ರ ನಿರೀಕ್ಷೆ ಮಾಡಲು ಸಾಧ್ಯ.
ಶೀಲಾ ಡಿಸೋಜ, ಸದಸ್ಯೆ, ಪ.ಪಂ., ಸೋಮವಾರಪೇಟೆ.
ಇಂದಿನ ಬಜೆಟ್‌ನಲ್ಲಿ ಕೊಡಗಿನ ಆಸ್ಪತ್ರೆಗಳಿಗೆ ಅನುದಾನ ನೀಡಲಾಗಿದೆ. ಆದರೆ ಕೊಡಗಿನ ರೈತರ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈ ಹಿಂದಿನಿAದಲೂ ಉಚಿತ ವಿದ್ಯುತ್ ಬೇಡಿಕೆ ಇತ್ತು. ಅದೂ ಈ ಬಾರಿ ಪ್ರಸ್ತಾಪ ಆಗಲಿಲ್ಲ. ಮಾನವ ಪ್ರಾಣಿ ಸಂಘರ್ಷ ಮಿತಿ ಮೀರಿದೆ. ಅದರ ಬಗ್ಗೆ ಕೂಡ ಯಾವುದೇ ವಿಶೇಷ ಅನುದಾನ ನೀಡಿಲ್ಲ.
ನವ್ಯ ರಾಘವೇಂದ್ರ, ಗೃಹಿಣಿ, ಗೋಣಿಕೊಪ್ಪ
ಕೃಷಿ, ಪಶುಸಂಗೋಪನೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನುದಾನ, ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಿದ್ದಾರೆ. ಮಾದರಿ ರಾಜ್ಯ ಎಂಬ ನಿಟ್ಟಿನಲ್ಲಿ ಕೆಲಸ ಮಾಡುವೆವು ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ. ಕೃಷಿಗೆ ಡಿಜಿಟಲ್ ತಂತ್ರಜ್ಞಾನ, ಹೆಚ್ಚಿನ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಿರುವುದು ಉತ್ತಮ ಬೆಳವಣಿಗೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡಿ ಕೃತಕ ಬುದ್ಧಿ ಮತ್ತೆ ಮತ್ತು ಕೌಶಲಾಭಿವೃದ್ಧಿ ಕಡೆಗೆ ಒಲವು ತೊರಿಸಿರುವುದು ಶ್ಲಾಘನೀಯ.
ಗೀತಾ ಗಿರೀಶ್, ಆರ್ಥಿಕಾ ಸಲಹಾಗಾರರು ಮಡಿಕೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 16ನೇ ಬಜೆಟ್ ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಯನ್ನು ಮತ್ತಷ್ಟು ಪುಷ್ಠೀಕರಿಸುವುದರೊಂದಿಗೆ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ, ರೈತ ಕೇಂದ್ರೀಕೃತ, ಗ್ರಾಮೀಣಾಭಿವೃದ್ಧಿ, ನಾಗರಾಭಿವೃದ್ಧಿ ಹಾಗೂ ಮಾನವ-ಪ್ರಾಣಿ ಸಂಘರ್ಷ ನಿವಾರಣೆಗೆ ವಿಶೇಷ ಒತ್ತು ನೀಡಿದ್ದಾರೆ. ಇದು ಮುಖ್ಯಮಂತ್ರಿಗಳ ಸಾಮಾಜಿಕ ಬದ್ಧತೆ, ಆರ್ಥಿಕ ಕ್ಷೇತ್ರದಲ್ಲಿನ ವಿಶೇಷ ಅನುಭವ ಹಾಗೂ ಆಡಳಿತದಲ್ಲಿನ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿ.
ಸಂಕೇತ್ ಪೂವಯ್ಯ, ರಾಜ್ಯ ವಕ್ತಾರ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಪ್ರಾತಿನಿಧ್ಯತೆ ಕೊಟ್ಟಿರುವಂತೆ ಕಂಡುಬರುತ್ತಿದೆ. ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಮೂಲಸೌಕರ್ಯಗಳಿಗೆ, ರಸ್ತೆ ಹಾಗೂ ಸಣ್ಣ ನೀರಾವರಿ, ನಾಗರಿಕ ಸರಬರಾಜು, ಕೃಷಿ, ಪ್ರಾದೇಶಿಕ ಅಸಮಾನತೆಯ ನಿವಾರಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲವರ್ಧನೆ, ಸಾರಿಗೆಯ ಸುಗಮ ವ್ಯವಸ್ಥೆ, ಕೃಷಿ ಯಾಂತ್ರೀಕರಣ, ಹನಿ ಮತ್ತು ತುಂತುರು ನೀರಾವರಿಗತೆ ಪ್ರಾಧಾನ್ಯತೆಯನ್ನು ನೀಡಿದಂತೆ ಕಾಣುತ್ತಿದೆ.
ಡಿ.ಎ. ಕಮರುನ್ನೀಸ, ಶಿಕ್ಷಕಿ, ಹೆಗ್ಗಳ, ವಿರಾಜಪೇಟೆ.