ಕಾಡಾನೆಗಳ ನಿಯಂತ್ರಣಕ್ಕೆ ಬಜೆಟ್‌ನಲ್ಲಿ ಹಣ

ಕಾಡಾನೆ ದಾಳಿಗೆ ಬಲಿಯಾದ ಗುಜ್ಜನಹಳ್ಳಿ ಗ್ರಾಮದ ಕೂಲಿ ಕಾರ್ಮಿಕನ ತಾಯಿ ಪಾರ್ವತಮ್ಮ ಅವರಿಗೆ ಸಾಂತ್ವಾನ ಹೇಳುತ್ತಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ.
ಕಾಡಾನೆ ದಾಳಿಗೆ ಬಲಿಯಾದ ಗುಜ್ಜನಹಳ್ಳಿ ಗ್ರಾಮದ ಕೂಲಿ ಕಾರ್ಮಿಕನ ತಾಯಿ ಪಾರ್ವತಮ್ಮ ಅವರಿಗೆ ಸಾಂತ್ವಾನ ಹೇಳುತ್ತಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ.
Published on

ಬೇಲೂರು: ಎಂಟು ದಿನಗಳ ಹಿಂದೆ ಕಾಡಾನೆ ದಾಳಿಗೆ ಬಲಿಯಾದ ತಾಲೂಕಿನ ಗುಜ್ಜನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಅನೀಲ್ ಅರಸು ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಶಾಸಕ ಎಚ್.ಕೆ.ಸುರೇಶ್ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಮೃತನ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅನಿಲ್ ಅರಸ್ (27) ಎಂಬ ಕೂಲಿ ಕಾರ್ಮಿಕ ಬ್ಯಾದನೆ ಗ್ರಾಮದ ಅಣ್ಣಾಮಲೈ ಎಸ್ಟೇಟ್‌ನಲ್ಲಿ ಕೆಲಸ ಮುಗಿಸಿ ಹೊರಡುವ ಸಂದರ್ಭ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಬಳಿಕ ವಿವಿಧ ಪ್ರಗತಿಪರ ಸಂಘಟನೆಗಳು ಅರೇಹಳ್ಳಿ ಬಂದ್ ಮಾಡಿ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಪ್ರತಿಭಟಿಸಿ ಸ್ಥಳಕ್ಕೆ ಅರಣ್ಯ ಸಚಿವರು, ಹಿರಿಯ ಅಧಿಕಾರಿಗಳು ಆಗಮಿಸಬೇಕೆಂದು ಪಟ್ಟು ಹಿಡಿದಿದ್ದರು. ಇದೀಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೃತ ಅನಿಲ್ ಮನೆಗೆ ಭೇಟಿ ನೀಡಿ ತಾಯಿ ಪಾರ್ವತಮ್ಮ ಹಾಗೂ ಬೆಳ್ಳಾವರದಲ್ಲಿ ಮೃತಪಟ್ಟ ಮತ್ತೊಂದು ಕುಟುಂಬಕ್ಕೆ ಸಾಂತ್ವನ ಹೇಳಿದರು.

ನಿಮ್ಮೊಂದಿಗೆ ಸರ್ಕಾರ ಸದಾ ಇರುತ್ತೆ. ನಿಮಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಮೃತರ ಕುಟುಂಬ ಸದಸ್ಯರಿಗೆ ಸಚಿವರು ತಿಳಿಸಿದರು.

ಬಳಿಕ ಸುದ್ದಿಗಾರರೊದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಎಂಬತ್ತರ ದಶಕದಿಂದಲೂ ಕಾಡಾನೆಗಳ ಸಮಸ್ಯೆ ಕಾಡುತ್ತಿದೆ. ಆಗಲೂ ಕಾಡಾನೆಗಳನ್ನು ಹಿಡಿದು ಬೇರೆಡೆ ಬಿಟ್ಟರೂ ಮತ್ತೆ ಬರುತ್ತಿವೆ. ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ 3 ಜನರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಶಾಸಕ ಸುರೇಶ್, ಸಂಸದ ಶ್ರೇಯಸ್ ಗಮನಕ್ಕೆ ತಂದಿದ್ದಾರೆ. ಸರ್ಕಾರದಿಂದ ಪರಿಹಾರ ಕೊಡುತ್ತೇವೆ ಎಂದು ಮಾಹಿತಿ ನೀಡಿದರು.

ನಾನು ಸಚಿವನಾದ ನಂತರ ನಾಲ್ಕನೇ ಬಾರಿ ಹಾಸನಕ್ಕೆ ಬಂದಿದ್ದೇನೆ. ಆನೆಗಳ ಸಮಸ್ಯೆಯನ್ನು ಪಕ್ಷಾತೀತವಾಗಿ ನೋಡುತ್ತಿದ್ದೇವೆ. ಅನಿಲ್ ಅರಸ್ ತಾಯಿಗೆ ಹೆಚ್ಚಿನ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಮಾತಾಡಿದ್ದೇನೆ. ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಸಿಸಿಎಫ್ ಸೇರಿದಂತೆ ಹಿರಿಯ ಅಧಿಕಾರಿಗಳಿದ್ದಾರೆ. ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಈ ಭಾಗದ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.

ಕೊಡಗಿನಲ್ಲಿ 100 ಆನೆ, ಬೇಲೂರು-ಸಕಲೇಶಪುರದಲ್ಲಿ 100 ಆನೆಗಳಿವೆ. ಅವುಗಳನ್ನು ಬೇರೆಡೆ ಕಳುಹಿಸಿದರೂ ವಾಪಸ್ ಬರುತ್ತಿವೆ. ಆದ್ದರಿಂದ ಅರಣ್ಯ ಇಲಾಖೆಯಿಂದ ಹಾಸನ-ಚಿಕ್ಕಮಗಲೂರು-ಕೊಡಗು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ 2 ಸಾವಿರ ಹೆಕ್ಟೇರ್ ಭೂಮಿ ಮೀಸಲಿಟ್ಟಿದ್ದೇವೆ. ಈ ಬಾರಿಯ ಬಜೆಟ್‌ನಲ್ಲಿ 50 ರಿಂದ 100 ಕೋಟಿ ರೂ. ಮೀಸಲಿರಿಸಲಾಗುವುದು. ಕಾಡಾನೆ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಹಲವಾರು ಯೋಜನೆ ರೂಪಿಸಿದೆ. ಮೃತರ ಕುಟುಂಬಕ್ಕೆ ಸರ್ಕಾರ 15 ಲಕ್ಷ ರೂ. ಪರಿಹಾರ ನೀಡಿದೆ. ಇನ್ನೂ ಹೆಚ್ಚಿನ ಪರಿಹಾರ ಕೊಡಿಸಲಾಗುವುದು ಎಂದರು.

ಸಂಸದ ಶ್ರೇಯಸ್ ಪಾಟೇಲ್, ಶಾಸಕರಾದ ಎಚ್.ಕೆ.ಸುರೇಶ್, ಸಿಮೆಂಟ್ ಮಂಜು, ರಾಜೇಗೌಡ, ಮಾಜಿ ಸಚಿವ ಬಿ.ಶಿವರಾಂ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಡು ಕೊಂಡಲು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಹಮದ್ ಸುಚಿತಾ, ಡಿವೈಎಸ್‌ಪಿ ಲೋಕೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net