ಬಜೆಟ್ ನಿರೀಕ್ಷೆ: ಕೆಎಂಸಿಆರ್​ಐಗೆ ಬೇಕು 515 ಕೋಟಿ ರೂ.

kmcri
Published on

ಮರಿದೇವ ಹೂಗಾರ ಹುಬ್ಬಳ್ಳಿ

ಪ್ರತಿ ವರ್ಷ ಬಜೆಟ್​ನಲ್ಲಿ ನಿರಾಸೆ ಅನುಭವಿಸುವ ಕರ್ನಾಟಕ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್​ಐ) ಈ ಬಾರಿ 515 ಕೋಟಿ ರೂ. ಅರ್ಥಿಕ ನೆರವಿನ ಬೇಡಿಕೆ ಮಂಡಿಸಿದೆ. ರಾಜ್ಯ ಸರ್ಕಾರಕ್ಕೆ ಅನುದಾನ ಸೇರಿ ಹಲವು ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದೆ.

2024-25ನೇ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ 417 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಆಗ ಸಿಕ್ಕಿದ್ದು ಬರೀ 233 ಕೋಟಿ ರೂ. ಈ ಬಾರಿಯೂ ಹಲವು ಯೋಜನೆಗಳ ಸಮೇತ ಬೇಡಿಕೆಯನ್ನು ರವಾನಿಸಿದ್ದು, ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಹೆಚ್ಚು ಅನುದಾನ ಸಿಗುವ ನಿರೀಕ್ಷೆ ಇಟ್ಟುಕೊಂಡಿದೆ.

ಕೆಎಂಸಿಆರ್​ಐನ ವೈದ್ಯಕೀಯ ಸಿಬ್ಬಂದಿ ವೇತನಕ್ಕೆ ಪ್ರತಿ ವರ್ಷ ಸುಮಾರು 150 ಕೋಟಿ ರೂ. ಬೇಕು. ವೇತನ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸೇರಿ ಒಟ್ಟು 515 ಕೋಟಿ ರೂ. ಬೇಕು ಎಂದು ಹೇಳಿದೆ. ಔಷಧಕ್ಕಾಗಿ ವಾರ್ಷಿಕ 40 ಕೋಟಿ ರೂ. ಖರ್ಚು ಮೀರುತ್ತದೆ. ರಾಜ್ಯ ಸರ್ಕಾರಕ್ಕೆ, ಬೆಂಗಳೂರು ಮೆಡಿಕಲ್ ಕಾಲೇಜ್, ಮೈಸೂರು ಮೆಡಿಕಲ್ ಕಾಲೇಜ್​ಗಳ ಮೇಲಿರುವ ಕಾಳಜಿ ಈ ಭಾಗದ ಕೆಎಂಸಿಆರ್​ಐ ಮೇಲಿಲ್ಲವೆಂಬ ಆಪಾದನೆಗಳಿವೆ.

ಅಭಿವೃದ್ಧಿಗೆ ಹೊಡೆತ

ಉತ್ತರ ಕರ್ನಾಟಕದ 8 ಜಿಲ್ಲೆಗಳ ರೋಗಿಗಳು ಚಿಕಿತ್ಸೆಗೆ ಕೆಎಂಸಿಆರ್​ಐ ಗೆ ಆಗಮಿಸುತ್ತಾರೆ. ನಿತ್ಯ ಹೊರ ರೋಗಿಗಳ ಸಂಖ್ಯೆ 3 ಸಾವಿರಕ್ಕೂ ಹೆಚ್ಚಿದೆ. ಒಳ ರೋಗಿಗಳ ಸಂಖ್ಯೆ ಸಾವಿರ ಇದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಕೈಗೆತ್ತಿಕೊಳ್ಳಲು ಅನುದಾನದ ಕೊರತೆ ಎದುರಿಸುತ್ತಿದೆ.

ಆಂತರಿಕ ಸಂಪನ್ಮೂಲ ಕ್ರೋಢೀಕರಣದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ರೀತಿಯ ಸಹಕಾರ ನೀಡುತ್ತಿವೆ. ಈ ಬಾರಿಯೂ ರಾಜ್ಯ ಬಜೆಟ್​ನಲ್ಲಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಡಾ.ಎಸ್.ಎಫ್. ಕಮ್ಮಾರ, ಕೆಎಂಸಿಆರ್​ಐ ನಿರ್ದೇಶಕ

ಪ್ರಸ್ತಾವನೆಯಲ್ಲೇನಿದೆ?

*200 ಹಾಸಿಗೆಯ ಪ್ರಾದೇಶಿಕ ಕ್ಯಾನ್ಸರ್ ಕೇರ್ ಕೇಂದ್ರ

*ಲೆವೆಲ್-2 ಟ್ರಾಮಾ ಕೇರ್ ಸೆಂಟರ್

*ಪ್ರತ್ಯೇಕ ಪ್ಯಾರಾ ಮೆಡಿಕಲ್ ಕಾಲೇಜ್

*ಒಳ ರಸ್ತೆಗಳ ನಿರ್ಮಾಣ

*ವಸತಿ ನಿಲಯ ಸ್ಥಳಗಳಲ್ಲಿ ಜಲನಿರೋಧಕ

*ಯುಜಿಡಿ ಲೈನ್ ನವೀಕರಣ

*750 ಕೆವಿಎ ಜನರೇಟರ್

*ಕೇಂದ್ರ ಗ್ರಂಥಾಲಯದ ದುರಸ್ತಿ

*ಮಾದರಿ ವಿಶ್ರಾಂತಿ ಗೃಹ ನಿರ್ಮಾಣ

*ಸುಸಜ್ಜಿತ ಉಪಹಾರ ಗೃಹ

*3 ಟೆಸ್ಲಾ ಎಂಆರ್​ಐ ಯಂತ್ರ, 160 ಸ್ಲೈಸ್ ಸಿಟಿ ಸ್ಕ್ಯಾನ್ ಯಂತ್ರ

*240 ಹಾಸಿಗೆಯ ಮೂತ್ರಪಿಂಡ ಹಾಗೂ ಮೂತ್ರಕೋಶ ವಿಭಾಗದ ಅಭಿವೃದ್ಧಿ

*ಚಿಕ್ಕಮಕ್ಕಳ ಆಸ್ಪತ್ರೆಯ 4-5 ಅಂತಸ್ತಿನ ಕಟ್ಟಡ ನಿರ್ವಣಕ್ಕೆ ಅನುದಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net