

ಮಾನ್ವಿ: ಪಟ್ಟಣದಲ್ಲಿ ಕುಡಿವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಈ ಸಲದ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಪುರಸಭೆ ಸದಸ್ಯ ರಾಜಾ ಮಹೇಂದ್ರನಾಯಕ ಒತ್ತಾಯಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಪುರಸಭೆ ಅಧ್ಯಕ್ಷೆ ಸುಫಿಯಾಬೇಗಂ ಅಧ್ಯಕ್ಷತೆಯಲ್ಲಿ ನಡೆದ 2021-22ನೇ ಸಾಲಿನ ವಾರ್ಷಿಕ ಆಯ-ವ್ಯಯ ಅಂದಾಜು ಪಟ್ಟಿ ತಯಾರಿಕೆಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 2021-22ನೇ ಸಾಲಿನಲ್ಲಿ ಉತ್ತಮ ಬಜೆಟ್ ಮಂಡಿಸಬೇಕು. ನಗರೋತ್ಥಾನ ಯೋಜನೆಯಡಿ ಮಂಜೂರಾದ 5 ಕೋಟಿ ರೂ. ಅನುದಾನದಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಅಪೂರ್ಣ ಮತ್ತು ಕಳಪೆ ಕಾಮಗಾರಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.
ಪುರಸಭೆ ವಾಣಿಜ್ಯ ಮಳಿಗೆಗಳ ಹೊಸದಾಗಿ ಟೆಂಡರ್ ಕರೆದು ಡಿಪಾಜಿಟ್, ಬಾಡಿಗೆ ಹೆಚ್ಚಿಸುವುದು ಮತ್ತು ಅನಧಿಕೃತ ನಳಗಳಿಗೆ ಕಡಿವಾಣ ಹಾಕಿ ಅಕ್ರಮ ಸಕ್ರಮದಡಿ ಅಧಿಕೃತ ಮಾಡಿಕೊಂಡು ಪುರಸಭೆ ಹೆಚ್ಚಿನ ಆದಾಯ ತರಬೇಕು. ಪತ್ರಿಕಾ ಭವನಕ್ಕೆ ಪಿಠೋಪಕರಣಗಳಿಗೆ ಅನುದಾನ ನೀಡುವಂತೆ ಸಭೆಯ ಗಮನಕ್ಕೆ ತಂದರು.
ಪುರಸಭೆ ಉಪಾಧ್ಯಕ್ಷ ಕೆ.ಶುಕಮುನಿ, ಸದಸ್ಯರಾದ ಸಾಬೀರ್‌ಪಾಷ, ಇಬ್ರಾಹಿಂ ಖುರೇಶಿ, ರೇವಣಸಿದ್ದಯ್ಯಸ್ವಾಮಿ, ಶರಣಬಸವಗೌಡ, ಶೇಖ್ ಫರೀದ್‌ಉಮ್ರಿ, ಹುಸೇನ್‌ಭಾಷಾ, ಭಾಷಸಾಬ್, ವೆಂಕಟೇಶನಾಯಕ, ಮುಖಂಡರಾದ ಜಯಪ್ರಕಾಶ, ಡಿ.ರಾಮಕೃಷ್ಣ, ಜಿಲಾನಿಖುರೇಶಿ, ವೀರೇಶ, ಹನುಮಂತ ಭೋವಿ, ಶಿವರಾಜನಾಯಕ, ಮುಖ್ಯಾಧಿಕಾರಿ ಜಗದೀಶ ಭಂಡಾರಿ ಇತರರಿದ್ದರು.