

ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ 2020-21ನೇ ಸಾಲಿನ 52 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದೆ. ವಿವಿಧ ಮೂಲಗಳಿಂದ 179.23 ಕೋಟಿ ರೂ. ಆದಾಯದ ನಿರೀಕ್ಷೆ ಹೊಂದಿದ್ದು, ಅಭಿವೃದ್ಧಿ ಕೆಲಸಗಳಿಗೆ 178.71 ಕೋಟಿ ರೂ. ವ್ಯಯಿಸಲಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿದ ಸಭೆಯಲ್ಲಿ ಆಯುಕ್ತ ಪ್ರೀತಂ ನಸ್ಲಾಪುರೆ, 2020-21ನೇ ಸಾಲಿನ ಆಯ-ವ್ಯಯದ ಅಂದಾಜು ಪಟ್ಟಿ ಮಂಡಿಸಿದರು. ಅದರಲ್ಲಿ ಅಭಿವೃದ್ಧಿ ಕಾಮಗಾರಿ, ಹೊಸ ಯೋಜನೆ, ಇತರ ಕಾಮಗಾರಿಗಳು, ಪ್ರಾಧಿಕಾರ ಕಚೇರಿಯ ಆಡಳಿತ ಕಟ್ಟಡ ಕಚೇರಿ ನಿರ್ವಹಣೆ ಹಾಗೂ ನವೀಕರಣ, ಭೂಸ್ವಾಧೀನ ವೆಚ್ಚ, ಠೇವಣಿ ಮುಂಗಡಗಳು ಸೇರಿ ಒಟ್ಟು 179.23 ಕೋಟಿ ರೂ.ಬಜೆಟ್ ಮಂಡಿಸಿದರು.
4.47 ಕೋಟಿ ರಾಜಸ್ವ ನಿರೀಕ್ಷೆ: 2020-21ನೇ ಸಾಲಿನ ಬಜೆಟ್‌ನಲ್ಲಿ ಮನೆ ತೆರಿಗೆ, ಆರೋಗ್ಯ ಕರ, ಗ್ರಂಥಾಲಯ ಕರ, ಭಿಕ್ಷುಕರ ಕರ, ಉತ್ತಮತೆ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ದಂಡ, ಪರಿಶೀಲನಾ ಶುಲ್ಕ, ಉಪ ವಿಭಜನೆ ಶುಲ್ಕ, ನವೀಕರಣ ಶುಲ್ಕ, ಖಾಸಗಿ ರೂಪುರೇಖೆಯಿಂದ ಅಭಿವೃದ್ಧಿ ಹಾಗೂ ಮೇಲ್ವಿಚಾರಣೆ, ಅರ್ಜಿಗಳು, ಟೆಂಡರ್ ಫಾರ್ಮ್‌ಗಳು, ಸಮುದಾಯ ಭವನ ಕಟ್ಟಡಗಳ ಬಾಡಿಗೆ, ವಿಳಂಬ ಖಾತೆಯಿಂದ ಬಂದ ಬಡ್ಡಿ ಹಾಗೂ ಇತರ ಬಡ್ಡಿ, ವಾಹನ ಹರಾಜು ಇತ್ಯಾದಿಗಳಿಂದ 4.47 ಕೋಟಿ ರೂ. ರಾಜಸ್ವ ಸ್ವೀಕೃತಿ ನಿರೀಕ್ಷೆ ಹಾಕಿಕೊಳ್ಳಲಾಗಿದೆ. ಕೆರೆಗಳ ಪುನಶ್ವೇತನಾ ಶುಲ್ಕ, ಖುಲ್ಲಾ ಜಾಗ ಶುಲ್ಕ, ಸ್ಲಂ ಪ್ರದೇಶ ಅಭಿವೃದ್ಧಿ ನಿಧಿ 1.58 ಕೋಟಿ ರೂ. ಸಂಗ್ರಹ ಮಾಡಲಾಗುತ್ತಿದೆ.
161.17 ಕೋಟಿ ವಸೂಲಿ ಗುರಿ: ಬಸವನ ಕುಡಚಿಯ ದೇವರಾಜ ಅರಸ ಕಾಲನಿ, ಕಣಬರ್ಗಿ ರಾಮತೀರ್ಥ ನಗರ, ಕುವೆಂಪು ನಗರ, ಸ್ವಾತಂತ್ರೃಯೋಧರ ಕಾಲನಿ, ಸಹ್ಯಾದ್ರಿ ನಗರ, ಲಕ್ಷ್ಮೀ ಟೇಕ್, ಟಿಳಕವಾಡಿಯ ಕಾಂಗ್ರೆಸ್ ಬಾವಿ, ಕುಮಾರಸ್ವಾಮಿ ಬಡಾವಣೆ, ಅನಗೋಳ, ವಡಗಾವಿ, ಭಾಗ್ಯನಗರ 2ನೇ ಹಂತ ಸೇರಿ ವಿವಿಧ ನಿವೇಶನ ಹರಾಜು ಹಾಗೂ ಹೆಚ್ಚುವರಿ ಮೌಲ್ಯದಿಂದ 161.17 ಕೋಟಿ ರೂ. ವಸೂಲಿ ಗುರಿ ಹಾಕಿಕೊಂಡಿದೆ.
5.46 ಕೋಟಿ ರೂ. ಪ್ರಾಧಿಕಾರದ ವೆಚ್ಚ: 2020-21ನೇ ಸಾಲಿನ ಬಜೆಟ್‌ನಲ್ಲಿ ಬುಡಾ ಅಧ್ಯಕ್ಷರ ಗೌರವಧನ, ಮನೆ ಬಾಡಿಗೆ, ಭತ್ಯೆ, ಸದಸ್ಯರ ಸಭೆಯ ಭತ್ಯೆ, ಪ್ರಾಧಿಕಾರದ ನಿವೃತ್ತ ಸಿಬ್ಬಂದಿಗೆ ಪಿಂಚಣಿ ಹಾಗೂ ಪಿಂಚಣಿಯ ಪಾವತಿ, ಪ್ರಾಧಿಕಾರದ ಕಾಯಂ ನೌಕರರ ಹೊಸ ಪಿಂಚಣಿ ಯೋಜನೆ, ಸಿಬ್ಬಂದಿಯ ವೆಚ್ಚ ಮರು ಪಾವತಿ, ಪ್ರಾಧಿಕಾರದ ಸದಸ್ಯರ ಪ್ರವಾಸ ಭತ್ಯೆ, ಸಿಬ್ಬಂದಿಗೆ ರಜಾ ಪ್ರಯಾಣ ರಿಯಾಯಿತಿ, ರಾಷ್ಟ್ರೀಯ ಹಬ್ಬಗಳ ಆಚರಣೆಯ ವೆಚ್ಚ ಸೇರಿ ಒಟ್ಟು 4.63 ಕೋಟಿ ರೂ. ಹಾಗೂ ಲೇಖನ ಸಾಮಗ್ರಿ, ಮುದ್ರಣ ಪ್ರಕಟಣೆ, ದೂರವಾಣಿ ವೆಚ್ಚ ಮತ್ತು ಸಾದಿಲ್ವಾರು ವೆಚ್ಚಕ್ಕೆ 83 ಲಕ್ಷ ರೂ.ವೆಚ್ಚ ಮಾಡಲಿದೆ.
ನಿರ್ವಹಣೆಗೆ 6.97 ಕೋಟಿ ರೂ.: ಪ್ರಾಧಿಕಾರದ ಆಡಳಿತ ಕಚೇರಿ ನಿರ್ವಹಣೆ, ಮೊದಲನೇ ಮಹಡಿ ಕಟ್ಟಡ ನಿರ್ಮಾಣ, ವಸತಿ ಗೃಹ ನಿರ್ವಹಣೆ, ಸಮುದಾಯ ಭವನ, ಮಳಿಗೆಗಳ ನಿರ್ವಹಣೆ, ಉದ್ಯಾನಗಳ ನಿರ್ವಹಣೆ ಸೇರಿ ಇನ್ನಿತರ ನಿರ್ವಹಣೆಗಾಗಿ 6.97 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕೆರೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ 2 ಕೋಟಿ ರೂ. ವೆಚ್ಚ ಉಲ್ಲೇಖಿಸಲಾಗಿದೆ. 2020-21ನೇ ಸಾಲಿನ ಬಜೆಟ್‌ನಲ್ಲಿ ಪ್ರಾಧಿಕಾರದ ಯೋಜನಾ ವ್ಯಾಪ್ತಿಯಲ್ಲಿ ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ಆಟದ ಮೈದಾನ, ಉದ್ಯಾನಗಳು ಇತ್ಯಾದಿ ನಿರ್ಮಾಣ, ಮಹಾಯೋಜನೆ ನಕ್ಷೆ, ಇನ್ನಿತರ ನಕ್ಷೆಗಳು, ಸ್ಥಳೀಯ ಯೋಜನಾ ಪ್ರದೇಶ ವಿಸ್ತರಿಸುವ ಕುರಿತು ನಕ್ಷೆ ಮುದ್ರಣ, ಸ್ವಾಗತ ಕಮಾನ್ ಇನ್ನಿತರ ಕಾಮಗಾರಿಗಳಿಗಾಗಿ 6 ಕೋಟಿ ರೂ.ವೆಚ್ಚ ಮಾಡುತ್ತಿದೆ. ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಪ್ರಾಧಿಕಾರದ ಸಿಬ್ಬಂದಿ ಇದ್ದರು.
2020-21ನೇ ಸಾಲಿನ 179.23 ಕೋಟಿ ರೂ. ಬಜೆಟ್ ಮಂಡನೆಯಾಯಿತು. ಜನರ ಹಿತದೃಷ್ಟಿಯಿಂದ ಮುಂದಿನ 30 ವರ್ಷದ ಅವಧಿಯಲ್ಲಿ ಬೆಳಗಾವಿ ನಗರ ಅಭಿವೃದ್ಧಿ ಹಾಗೂ ವಿಸ್ತರಣೆ ಕುರಿತು ಮಾಸ್ಟರ್ ಪ್ಲಾನ್ ಸಿದ್ಧ ಪಡಿಸುವುದು. ಕಣಬರ್ಗಿ ಹೊಸ ಬಡಾವಣೆ ನಿರ್ಮಾಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿದೆ. | ಘೂಳಪ್ಪ ಹೊಸಮನಿ ಬುಡಾ ಅಧ್ಯಕ್ಷರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಬುಡಾದಿಂದ 2020-21ನೇ ಸಾಲಿನಲ್ಲಿ 52 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ. ಜತೆಗೆ ಸಭೆಯಲ್ಲಿ ಕಣಬರ್ಗಿ ಹೊಸ ಬಡಾವಣೆ ನಿರ್ಮಾಣ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದು, ಅಕ್ರಮ ಬಡಾವಣೆಗಳ ವಿರುದ್ಧ ಕ್ರಮ ಹಾಗೂ ನಗರ ಸುತ್ತಮುತ್ತಲಿನ ಪ್ರದೇಶಗಳನ್ನು ನಗರ ಯೋಜನೆ ವ್ಯಾಪ್ತಿಗೆ ತರುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.| ಪ್ರೀತಂ ನಸ್ಲಾಪುರೆ ಬುಡಾ ಆಯುಕ್ತ