300 ಕೋಟಿ ರೂ ಅನುದಾನಕ್ಕೆ ಮನವಿ: ಸಿಎಂಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಪತ್ರ

09_02_Mdy_04(C.P.Umesh)
Published on

ಮಂಡ್ಯ: ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ 300 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಪತ್ರ ಬರೆದಿದ್ದಾರೆ.

ಜಿಲ್ಲೆಯ ರೈತರು ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅಂತೆಯೆ, ರೈತರ ಜೀವನಾಡಿಯಾಗಿರುವ ಮೈಷುಗರ್ ಕಾರ್ಖಾನೆಗೆ 100 ಕೋಟಿ ರೂ. ವಿಶೇಷ ಅನುದಾನ ನೀಡಬೇಕು. ಈ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇನ್ನು ಮಂಡ್ಯ ನಗರದ ರಸ್ತೆಗಳು ತುಂಬ ಶಿಥಿಲಗೊಂಡಿವೆ. ಮಾತ್ರವಲ್ಲದೆ, ಒಳಚರಂಡಿ ವ್ಯವಸ್ಥೆಯ ಸಮಸ್ಯೆ ಇದೆ. ಪರಿಣಾಮ, ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ನಗರದ ಅಭಿವೃದ್ಧಿಗೆಂದು 100 ಕೋಟಿ ರೂ. ವಿಶೇಷ ಪ್ಯಾಕೇಜ್ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ.

ಇನ್ನು ಜಿಲ್ಲೆಯ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಹಾಳಾಗಿದೆ. ಕೆಲ ತಿಂಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ತೀವ್ರತರವಾಗಿ ಹದಗೆಟ್ಟಿವೆ. ಇದರಿಂದಾಗಿ ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಚರಂಡಿ, ಅಡ್ಡ ಮೋರಿ ಮತ್ತು ಮಣ್ಣು ಮೇಲ್ಮೈ ಇರುವ ರಸ್ತೆಗಳ ಸ್ಥಿತಿ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಪ್ಯಾಕೇಜ್ ಮಂಜೂರು ಮಾಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net