

ಅರಸೀಕೆರೆ : ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸತ್ಯಭಾಮಾ ನಗರಸಭೆ ಕಚೇರಿ ಸಭಾಂಗಣದಲ್ಲಿ ಶನಿವಾರ 48.79 ಲಕ್ಷ ರೂ.ಉಳಿತಾಯ ಬಜೆಟ್ ಮಂಡಿಸಿದರು.
ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ ಮಳಿಗೆಗಳ ಬಾಡಿಗೆ, ಲೇಔಟ್ ಅಭಿವೃದ್ಧಿ ಶುಲ್ಕ, ನಗರೋತ್ಥಾನ ಸೇರಿ ವಿವಿಧ ಮೂಲಗಳಿಂದ 72.17 ಕೋಟಿ ರೂ.ರಾಜಸ್ವ ಸಂಗ್ರಹವಾಗಿದೆ. ರಸ್ತೆ ದುರಸ್ತಿ, ಕಂಪ್ಯೂಟರ್ ಖರೀದಿ, ವಾಣಿಜ್ಯ ಮಳಿಗೆಗಳ ನಿರ್ಮಾಣ, ಕೊಳವೆ ಬಾವಿ ಕೊರೆಯಿಸಿರುವುದು, ನಗರಸಭೆ ಸಿಬ್ಬಂದಿ ವೇತನ ಭತ್ಯೆ ಸೇರಿದಂತೆ 71.68 ಕೋಟಿ ರೂ.ಖರ್ಚು ಮಾಡಲು ನಿರ್ಧರಿಸಲಾಗಿದೆ. ಒಟ್ಟಾರೆ 48.79 ಲಕ್ಷ ರೂ. ಉಳಿತಾಯ ಬಜೆಟ್ ಆಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಜಟಾಪಟಿ- ಸಭೆ ಆರಂಭವಾಗುತ್ತಿದ್ದಂತೆ ಮೈಕ್ ಹಿಡಿದ ಸದಸ್ಯ ಸಮೀವುಲ್ಲಾ ಹಾಲಿ ಸದಸ್ಯರೊಬ್ಬರ ಪಾಲ್ಗೊಳ್ಳುವಿಕೆ ಕುರಿತು ಹೈಕೋರ್ಟ್ ಆದೇಶ ನೀಡಿದ್ದು ಸಭೆಗೆ ಮಾಹಿತಿ ನೀಡಬೇಕು ಎಂದರು. ತಕ್ಷಣವೇ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ನ್ಯಾಯಾಲಯದ ಆದೇಶ ಆಂಗ್ಲ ಭಾಷೆಯಲ್ಲಿದೆ. ಆದ್ದರಿಂದ ಸಾರಾಂಶವನ್ನು ನಾನೇ ಓದಿ ಹೇಳುತ್ತೇನೆ. ಮತದಾನ ಮಾಡುವ ಸನ್ನಿವೇಶದಲ್ಲಿ ಮಾತ್ರವೇ ನ್ಯಾಯಾಲಯದ ತೀರ್ಪು ಪಾಲಿಸಬೇಕು. ಸಭೆಯಲ್ಲಿ ಪಾಲ್ಗೊಳ್ಳಬೇಕೆ, ಬೇಡವೆ ಎಂದು ಹೇಳಿಲ್ಲ. ಈ ಬಗ್ಗೆ ಸುಖಾ ಸುಮ್ಮನೆ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ಏರು ದನಿಯಲ್ಲಿಯೇ ಉತ್ತರಿಸಿದ್ದು ಉಭಯ ಸದಸ್ಯರ ಜಟಾಪಟಿಗೆ ಕಾರಣವಾಗಿತ್ತು. ತಕ್ಷಣವೇ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಸತ್ಯಭಾಮಾ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಇಬ್ಬರನ್ನೂ ಸಮಾಧಾನಪಡಿಸಿದರು..
16ಎ