9.23 ಲಕ್ಷ ರೂ. ಉಳಿತಾಯದ ಬಜೆಟ್

27Kush002
Published on

ಕುಶಾಲನಗರ: ಕುಶಾಲನಗರ ಪುರಸಭೆಯ 2024-25ನೇ ಸಾಲಿನ ಆಯ-ವ್ಯಯ ಮಂಡನೆ ವಿಶೇಷ ಸಭೆ ಪುರಸಭೆಯ ಆಡಳಿತ ಅಧಿಕಾರಿ, ಉಪ ವಿಭಾಗಾಧಿಕಾರಿ ನರ್ವಡೆ ವಿನಾಯಕ್ ಕಾರ್ಭಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಪುರಸಭೆ ಸಭಾಂಗಣದಲ್ಲಿ ನಡೆಯಿತು. ಪುರಸಭೆ ಆಡಳಿತಾಧಿಕಾರಿ ವಿನಾಯಕ್ ಅವರು ರೂ.9.23 ಲಕ್ಷ ಉಳಿತಾಯ ಬಜೆಟ್ ಮಂಡನೆ ಮಾಡಿದರು.
2024-25 ನೇ ಸಾಲಿಗೆ ನಿರೀಕ್ಷಿತ ಆದಾಯ ರೂ.29,73,93,268 ಕೋಟಿ ರೂ. ಹಾಗೂ ನಿರೀಕ್ಷಿತ ಖರ್ಚು ರೂ.29,64,70,250 ಕೋಟಿ ರೂ. ಆಗಿದ್ದು, 9.23,018 ಲಕ್ಷ ರೂ. ಉಳಿತಾಯವಾಗಲಿದೆ ಎಂದು ತಿಳಿಸಿದರು. ಪಟ್ಟಣದ ಸಮಗ್ರ ಅಭಿವೃದ್ಧಿಯೊಂದಿಗೆ ವಿಶೇಷ ಯೋಜನೆಗಳಿಗೆ ಒತ್ತು ನೀಡುವ ಮೂಲಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ರೂಪಿಸಲಾಗಿದೆ ಎಂದು ತಿಳಿಸಿದರು.ಪುರಸಭೆ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ತಾಲೂಕು ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಸಿಎ ನಿವೇಶನ ಕಾಯ್ದಿರಿಸಲಾಗಿದೆ. ಸಮುದಾಯ ಭವನ ಅಭಿವೃದ್ಧಿ ಪಡಿಸಲು ರೂ.1 ಕೋಟಿ, ಪುರಸಭೆಯ ನೂತನ ಕಚೇರಿ ಕಟ್ಟಡಕ್ಕೆ ರೂ.3 ಕೋಟಿ, ಸ್ಮಶಾನ ಅಭಿವೃದ್ಧಿಗೆ ರೂ.30 ಲಕ್ಷ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ರೂ.50 ಲಕ್ಷ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಮೂಲ ಸೌಕರ್ಯಕ್ಕೆ ಆದ್ಯತೆ: ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾತನಾಡಿ, ತಾಲೂಕು ಕೇಂದ್ರ ಕುಶಾಲನಗರ ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿದೆ. ಇತ್ತೀಚೆಗೆ ಪುರಸಭೆ ವ್ಯಾಪ್ತಿಗೆ ಮುಳ್ಳುಸೋಗೆ ಪೂರ್ಣ ಕಂದಾಯ ಗ್ರಾಮ ಹಾಗೂ ಮಾದಾಪಟ್ಟಣ ಗ್ರಾಮದ ಭಾಗಶಃ ಪ್ರದೇಶಗಳು ಸೇರ್ಪಡೆಯಾಗಿದೆ. ಈ ಪ್ರದೇಶಗಳಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ. ರಸ್ತೆ, ನೀರು, ಚರಂಡಿ, ನೈರ್ಮಲ್ಯ, ಬೀದಿದೀಪ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ವೈಜ್ಞಾನಿಕವಾಗಿ ಒದಗಿಸಬೇಕಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net