

ಮಂಡ್ಯ: ಗೌತಮ ಬುದ್ಧರ ಚಿಂತನೆಗಳ ಅಳವಡಿಕೆಯಿಂದ ಮಾನವೀಯ ಮೌಲ್ಯ ಹೆಚ್ಚುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಬುದ್ಧ ಭಾರತ ಫೌಂಡೇಷನ್, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸ್ವಾಭಿಮಾನಿ ಸಮಸಮಾಜ ಸಂಘಟನೆ, ಅಂಬೇಡ್ಕರ್ ವಾರಿಯರ್ಸ್ ಸಂಘಟನೆ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಶಾಂತಿ ಮತ್ತು ಸುಭದ್ರತೆಗಾಗಿ ಬೌದ್ಧರ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವಕ್ಕೆ ಶಾಂತಿಯ ಪರಿಕಲ್ಪನೆ ಕೊಟ್ಟಂತಹ ಗೌತಮ ಬುದ್ಧರ ಚಿಂತನೆ, ಆದರ್ಶಗಳು ಮನುಷ್ಯನಿಗೆ ಅತ್ಯಗತ್ಯ. ಜೀವನದಲ್ಲಿ ಅಳವಡಿಸಿಕೊಂಡರೆ ಮಾನವೀಯ ಮೌಲ್ಯ ಹೆಚ್ಚುತ್ತದೆ ಎಂದು ನುಡಿದರು.
ಇಂದಿನ ದಿನಗಳಲ್ಲಿನ ಮಕ್ಕಳಿಗೆ ಬುದ್ಧರ ವೈಜ್ಞಾನಿಕ, ವೈಚಾರಿಕ ಚಿಂತನೆಗಳು, ಆದರ್ಶ ತಿಳಿಸುವ ಅಗತ್ಯವಿದೆ. ಅವರ ಸಂದೇಶಗಳು ಪುಸ್ತಕಗಳನ್ನು ಓದಿ ಅರಿವು ಹೆಚ್ಚಿಸಿಕೊಳ್ಳಬೇಕಿದೆ. ವಿಶ್ವಕ್ಕೆ ಶಾಂತಿ ಅಗತ್ಯವಿದೆ, ಒತ್ತಡದ ಜೀವನದಲ್ಲಿ ನೆಮ್ಮದಿಯ ಬದುಕು ಬೇಕಾಗಿದೆ. ಯಾಂತ್ರಿಕ, ತಾಂತ್ರಿಕ ಅಧುನಿಕ ಜಗತ್ತಿನಲ್ಲಿ ಎಲ್ಲವೂ ಇದೆ. ಶಾಂತಿ, ಅಶಾಂತಿ ಇದೆ. ಆದರೆ ಮನುಷ್ಯನಿಗೆ ಬೇಕಿರುವುದು ಅಂತರಂಗದಲ್ಲಿ ಶಾಂತಿ ನೆಲೆಗೊಳ್ಳಬೇಕಿದೆ. ಸಂಕ್ರಾಂತಿ ಸಂಭ್ರಮದ ದಿನಗಳಲ್ಲಿರುವ ಜಗತ್ತಿನಲ್ಲಿ ಎಲ್ಲರ ಸಹಕಾರದಿಂದ ಶಾಂತಿ ಸಾಧ್ಯ ಎಂದರು.
ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ನಾವೆಲ್ಲ ಮಕರ ಸಂಕ್ರಾಂತಿಯ ಹೊಸ್ತಿಲಲ್ಲಿದ್ದೇವೆ. ಸೂರ್ಯ ತನ್ನ ದಿಕ್ಕು-ಪಥವನ್ನು ಬದಲಾಯಿಸುವ ದಿನವನ್ನು ಮಕರ ಸಂಕ್ರಾಂತಿ ದಿನವಾಗಿ ಆಚರಿಸುತ್ತೇವೆ. ಇಡೀ ಜಗತ್ತಿಗೆ ಶಾಂತಿಗೆ ನಾಂದಿಯಾಡಿದ ಹಾಗೂ ಅದಕ್ಕಾಗಿ ತಮ್ಮ ಬದುಕನ್ನು ತೊಡಗಿಸಿಕೊಂಡಂತಹ ಮಹಾನ್ ಪುರುಷ ಬುದ್ಧರ ಹೆಸರಲ್ಲಿ ಬೌದ್ಧರ ಸುಗ್ಗಿ ಸಂಕ್ರಾಂತಿ ಆಚರಣೆಯಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ವಿಶ್ವದ ಶಾಂತಿ ಮತ್ತು ಸುಭದ್ರತೆಗಾಗಿ ಸಂದೇಶವಿದೆ. ಇದು ಜನತೆಗೆ ತಲುಪಬೇಕು. ನಮ್ಮ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿಯೇ ಕಾರ್ಯ ಮಾಡುತ್ತಿದೆ. ಪೊಲೀಸ್ ಕೆಲಸವೇ ಕಾನೂನು ಸುವ್ಯವಸ್ಥೆ ಮತ್ತು ಸುಭದ್ರತೆ ಕಾಪಾಡುವುದಾಗಿದೆ. ಈ ಪರಿಕಲ್ಪನೆ ನಿಂತಿರುವುದೇ ವಿಶ್ವಶಾಂತಿ ಮತ್ತು ಸುಭದ್ರತೆಯ ಮೇಲೆ, ದೇಶ-ವಿಶ್ವದಲ್ಲಿಯೇ ಇರಬಹುದು ಶಾಂತಿ ನೆಲೆಸಬೇಕು. ಜನಾಂಗೀಯ ದ್ವೇಷಗಳು, ಬೇರೆ ಬೇರೆ ಜಾತಿ, ಧರ್ಮ, ಸ್ಥಳದ ಆಧಾರದ ಮೇಲೆ ಒಬ್ಬರನ್ನೊಬ್ಬರು ದ್ವೇಷ ಸಾಧಿಸುವುದು, ಜಗಳ ಮಾಡುವುದನ್ನು ನಿಲ್ಲಿಸಲಾಗುತ್ತದೆ ಎಂದು ನುಡಿದರು.
ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗಪ್ಪ, ಫೌಂಡೇಷನ್ ಅಧ್ಯಕ್ಷ ಜೆ.ರಾಮಯ್ಯ, ಕಾರ್ಯದರ್ಶಿ ಬಿ.ಆಶಾಜ್ಯೋತಿ ರಾಮಯ್ಯ, ಸ್ವಾಭಿಮಾನಿ ಸಮಸಮಾಜ ಸಂಘಟನೆ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಅಂಬೇಡ್ಕರ್ ವಾರಿಯರ್ಸ್‌ನ ಗಂಗರಾಜ್, ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಶಿವರಾಜ್, ನಾರಾಯಣಸ್ವಾಮಿ, ನಿರಂಜನ್, ಸಿ.ಕುಮಾರಿ, ವೇಣುಗೋಪಾಲ್, ಎಂ.ವಿ.ಕೃಷ್ಣ, ಮಹೇಶ್ ಇತರರಿದ್ದರು.