

ಬೇಲೂರು: ತಾಲೂಕು ಆಡಳಿತ, ಗಾಂಧಾರ ಬುದ್ಧ ವಿಹಾರ ಟ್ರಸ್ಟ್, ಭಾರತೀಯ ಬೌದ್ಧ ಮಹಾಸಭಾ ಹಾಗೂ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಬುದ್ಧ ಜಯಂತಿ ಆಚರಿಸಲಾಯಿತು.
ಬುದ್ಧ ಜಯಂತಿ ಅಂಗವಾಗಿ ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಎಚ್.ಕೆ.ಸುರೇಶ್ ಮತ್ತಿತರ ಗಣ್ಯರು ಪುಷ್ಪಹಾರ ಹಾಕಿ, ನಂತರ ಬಂತೇಜಿಗಳಾದ ಗುಣರತ್ನ, ಹಾಗೂ ಜ್ಞಾನ ಸಾಗರ ಗುರುಗಳ ನೇತೃತ್ವದಲ್ಲಿ ಗೌತಮ ಬುದ್ಧರ ಪ್ರತಿಮೆಯ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ನೂರಾರು ಅಂಬೇಡ್ಕರ್ ಹಾಗೂ ಬುದ್ಧರ ಅಭಿಮಾನಿಗಳು, ಅನುಯಾಯಿಗಳು, ಗಾಂಧಾರ ಬುದ್ಧ ವಿಹಾರ ಟ್ರಸ್ಟ್ ಮತ್ತು ಭಾರತೀಯ ಬೌದ್ಧ ಮಹಾಸಭಾದ ಪದಾಧಿಕಾರಿಗಳು, ವಿವಿಧ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬುದ್ಧರ ಪ್ರತಿಮೆಯೊಂದಿಗೆ ಕಾಲ್ನಡಿಗೆಯಲ್ಲಿ ತಾಲೂಕು ಕಚೇರಿಯಿಂದ ಮುಖ್ಯರಸ್ತೆ ಮೂಲಕ ಅಂಬೇಡ್ಕರ್ ನಗರದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಸಾಗಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಮಾಲಿಕೆ ಹಾಕಿ ನಮಿಸಿದರು. ನಂತರ ಮುಂದುವರಿದ ಮೆರವಣಿಗೆ ಕೆಂಪೇಗೌಡ ವೃತ್ತದ ಮೂಲಕ ಬಸ್ ನಿಲ್ದಾಣ ಸಮೀಪದ ಅಂಬೇಡ್ಕರ್ ಭವನ ತಲುಪಿತು.
ತಾಲೂಕು ಆಡಳಿತದಿಂದ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಬುದ್ಧರ ತತ್ವ ಸಿದ್ಧಾಂತಗಳನ್ನು ಯಾರು ಅಳವಡಿಸಿಕೊಂಡು ಜೀವನ ಸಾಗಿಸುತ್ತಾರೋ ಅವರು ಉತ್ತಮ ಬದುಕು ರೂಪಿಸಿ ಕೊಳ್ಳುತ್ತಾರೆ. ಗೌತಮ ಬುದ್ಧರ ಪಂಚ ಶೀಲಗಳನ್ನು ಪಾಲನೆ ಮಾಡಿದರೆ ಮಾತ್ರ ಜೀವನದಲ್ಲಿ ಶಾಂತಿ ನೆಮ್ಮದಿ ಸಾಧ್ಯ ಎಂದರು.
ಇಂದು ಶಾಂತಿ ಸೌಹಾರ್ಧತೆಯನ್ನು ಕಾಪಾಡುವಲ್ಲಿ ಎಲ್ಲರೂ ವಿಫಲರಾಗಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ಬುದ್ಧ, ಬಸವ, ಅಂಬೇಡ್ಕರ್ ಅವರ ದಾರಿಯಲ್ಲಿ ನಡೆದರೆ ವಿಶ್ವದಲ್ಲಿ ಎಲ್ಲರೂ ಶಾಂತಿ, ನೆಮ್ಮದಿಯೊಂದಿಗೆ ಬದುಕಲು ಸಾಧ್ಯ. ಅಂಬೇಡ್ಕರ್ ಅವರು ಹೇಳಿದಂತೆ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು. ಆದ್ದರಿಂದ ಬುದ್ಧ, ಬಸವ, ಅಂಬೇಡ್ಕರ್ ಇತಿಹಾಸವನ್ನು ಮೊದಲು ತಿಳಿದು ಕೊಳ್ಳಬೇಕು. ಭಾರತೀಯರಾದ ನಾವುಗಳು ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಬೌದ್ಧ ಗುರುಗಳಾದ ಜ್ಞಾನ ಸಾಗರ ಬಂತೇಜಿ ಮಾತನಾಡಿದರು.
ಗುಣರತ್ನ ಬಂತೇಜಿ, ಹಾಗೂ ತಹಸೀಲ್ದಾರ್ ಎಂ.ಮಮತಾ, ತಾಪಂ ಇಒ ವಸಂತ ಕುಮಾರ್, ಗಾಂಧಾರ ಬೌದ್ಧ ವಿಹಾರ ಟ್ರಸ್ಟ್ ಕಾರ್ಯದರ್ಶಿ ವಕೀಲ ರಾಜು, ಭಾರತೀಯ ಬೌದ್ಧ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಬಿ.ಎಲ್.ಲಕ್ಷ್ಮಣ್, ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ, ತಾಲೂಕು ಕೆಡಿಪಿ ಸದಸ್ಯರಾದ ಜ್ಯೋತಿ, ನವೀನ್, ಉಪನ್ಯಾಸಕ ತಮ್ಮಣ್ಣಗೌಡ, ಮುಖಂಡರಾದ ಮಂಜುನಾಥ್, ಪರ್ವತಯ್ಯ, ಯೋಗೀಶ್, ಸ್ವಾಮಿ, ರಮೇಶ್, ಮಲ್ಲಿಕಾ, ರಘು, ಗಾಧಾರ ಬುದ್ಧ ವಿಹಾರದ ಗಂಘಾಧರ್, ಪ್ರವೀಣ್‌ಬೌದ್ಧ್, ಚಂದ್ರು, ಹರೀಶ್, ಮಂಜುನಾಥ್ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳಿದ್ದರು.