

ಮೈಸೂರು: ಬುದ್ಧ ಭಾರತವೇ ನಿಜವಾದ ಪ್ರಬುದ್ಧ ಭಾರತ, ಸಂವಿಧಾನದ ಪ್ರೇರಕ ಬೇರುಗಳು ಬುದ್ಧ ಗುರುವಿನ ಆಶಯಗಳಲ್ಲಿ ಇದೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವ ವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ವತಿಯಿಂದ ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಶುಕ್ರವಾರ ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡ ‘ಸ್ವಾತಂತ್ರೃ ಅಮೃತ ಮಹೊ ೀತ್ಸವ ನಡಿಗೆ-ಪ್ರಬುದ್ಧ ಭಾರತದ ಕಡೆಗೆ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಬುದ್ಧ ಅನ್ನುವುದರಲ್ಲಿಯೇ ಬುದ್ಧ ಇದೆ. ಬುದ್ಧ ಭಾರತವೇ ನಿಜವಾದ ಪ್ರಬುದ್ಧ ಭಾರತ. ಕೇವಲ ವ್ಯಕ್ತಿಯನ್ನು ಕೇಂದ್ರೀಕರಿಸಿ ಈ ಮಾತುಗಳನ್ನು ಆಡುತ್ತಿಲ್ಲ. ಬುದ್ಧ ಅಂದರೆ ಜಾತೀಯತೆಯನ್ನು ಮೀರಿದ ಬೌದ್ಧಿಕತೆ ಹಾಗೂ ಮತೀಯತೆಯನ್ನು ಮೀರಿದ ಮಾನಸಿಕತೆ ಯಾಗಿದೆ. ಸಂವಿಧಾನದ ಕರಡು ರಚನೆಯ ಸಂದರ್ಭ ‘ನಾನು ಫ್ರಾನ್ಸ್ ಕ್ರಾಂತಿಯಿಂದ ಪ್ರೇರಣೆ ಪಡೆದಿಲ್ಲ, ಬುದ್ಧನಿಂದ ಪ್ರೇರಣೆ ಪಡೆದಿದ್ದೇನೆ’ ಎಂದು ಅಂಬೇಡ್ಕರ್ ಹೇಳುತ್ತಾರೆ. ಹಾಗಾಗಿ ಸಂವಿಧಾನದ ಪ್ರೇರಕ ಬೇರುಗಳು ಬುದ್ಧ ಗುರುವಿನ ಆಶಯಗಳಲ್ಲಿ ಇದ್ದು, ಬುದ್ಧ ಗುರುವಿನ ಮಾನವೀಯ, ಕಾರುಣ್ಯ ಮತ್ತು ಸಹೋದರತ್ವದ ಭಾರತ ನಿರ್ಮಾಣವಾದರೆ ಅದುವೇ ನಿಜವಾದ ಪ್ರಬುದ್ಧ ಭಾರತ ಎಂದು ಅಭಿಪ್ರಾಯಪಟ್ಟರು.
ಚಲನಶೀಲತೆ ಇಲ್ಲದೆ ಇದ್ದರೆ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಿರಂತರ ಚಲನಶೀಲತೆ ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತದೆ. ಭಾರತ ಚಲನಶೀಲವಾಗಿ ನಡೆದುಕೊಂಡು ಬಂದಿದೆ ಎಂಬುದು ನಿಜ. ಆದರೆ, ಅದೇ ಸಂದರ್ಭದಲ್ಲಿ ಪ್ರಬುದ್ಧ ಭಾರತ ನಿರ್ಮಾಣದ ಕನಸು ನನಸಾಗಿದೆಯೇ ಎಂಬ ಕುರಿತು ಚಿಂತನೆ ನಡೆಸಬೇಕು. ದೇಶದಲ್ಲಿ ಪ್ರಬುದ್ಧತೆ ಹಾಗೂ ಅಪ್ರಬುದ್ಧತೆ, ವಿಚಾರ ಹಾಗೂ ವಿಕಾರ, ವಿವೇಕ ಮತ್ತು ಅವಿವೇಕ, ಸತ್ಯ ಮತ್ತು ಅಸತ್ಯ, ವ್ಯಾಖ್ಯಾನ ಮತ್ತು ಅಪವ್ಯಾಖ್ಯಾನಗಳ ನಡುವಿನ ಅಂತರ ಕಡಿಮೆ ಆಗಿದೆ. ಇಂಥದೊಂದು ಬಿಕ್ಕಟ್ಟು ದೇಶದಲ್ಲಿ ಸೃಷ್ಟಿಯಾಗಿದೆ. ಅಮಾಯಕ ಜನರಲ್ಲಿ ಇಂಥ ತಪ್ಪುಗಳು ಆದರೆ ಅದನ್ನು ನಾವು ಮನ್ನಿಸಬಹುದು. ಆದರೆ, ಪ್ರಜ್ಞಾವಂತರು ಅನ್ನಿಸಿಕೊಂಡವರೇ ಇಂಥದೊಂದು ಬಿಕ್ಕಟ್ಟು ಸೃಷ್ಟಿಸುತ್ತಿರುವುದು ಆತಂಕಕಾರಿ ವಿಚಾರ ಎಂದರು.
ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಜಿ. ಹೇಮಂತ ಕುಮಾರ್, ಮಾತನಾಡಿ, ವಿಶ್ವದಲ್ಲಿ ಭಾರತ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಇದರ ಹಿಂದೆ ಭಾರತದ ಚಾರಿತ್ರಿಕವಾದ ರಾಷ್ಟ್ರೀಯ ಚಳವಳಿ, ಭದ್ರ ಬುನಾದಿ ಇದೆ. ನಮ್ಮ ದೇಶ ಸ್ವಾತಂತ್ರೃ ಪಡೆದ ಸಮಯದಲ್ಲಿಯೇ ಸ್ವಾತಂತ್ರೃ ಪಡೆದ ಅನೇಕ ರಾಷ್ಟ್ರಗಳೊಂದಿಗೆ ಹೋಲಿಕೆ ಮಾಡಿದರೆ ನಮ್ಮ ದೇಶ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರ ಕುಮಾರ್, ಪ್ರಾಧ್ಯಾಪಕ ಡಾ.ಜೆ. ಸೋಮಶೇಖರ್ ಇದ್ದರು.