

ಮೈಸೂರು: ಬುದ್ಧ ಧಮ್ಮ ದಮನಿತರ ತಾಯಿ ಎಂದು ಸಾಹಿತಿ ಪ್ರೊ.ರಹಮತ್ ತರೀಕೆರೆ ವಿಶ್ಲೇಷಿಸಿದರು.
68ನೇ ಧಮ್ಮ ದೀಕ್ಷಾ ಪ್ರಯುಕ್ತ ಅಶೋಕ ವೃತ್ತದ ಬಳಿಯ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್ ಅವರ ಬುದ್ಧ ಮತ್ತು ಆತನ ಧಮ್ಮ’ ಕುರಿತು ಮಾತನಾಡಿದ ಅವರು, ಬುದ್ಧ ಧಮ್ಮ ಎಂದರೆ ಪ್ರಜೆ ಮತ್ತು ಕರುಣೆ. ಬುದ್ಧ ಧಮ್ಮ ದಲಿತರ ವಿಮೋಚನಾ ಮಾರ್ಗ ಮತ್ತು ಅದು ಬಿಡುಗಡೆ ದಾರಿ.
ಸಮಾಜದಿಂದ ಬಹಿಷ್ಕೃತರ ತಾಣವೂ ಹೌದು. ಸಮಾಜದ ತಳಸ್ತರ ಸಮುದಾಯದವರನ್ನು ಮೇಲಕ್ಕೆತ್ತುವ ಕಾರ್ಯ ಆಗಬೇಕು. ಅದು ಈ ಧರ್ಮದಿಂದ ಸಾಧ್ಯ ಎಂದು ಅಂಬೇಡ್ಕರ್ ಬಲವಾಗಿ ನಂಬಿದ್ದರು ಎಂದು ಹೇಳಿದರು.
ಬುದ್ಧ ಧಮ್ಮ ದೀಕ್ಷೆಗೂ ಮತ್ತು ಮತಾಂತರಕ್ಕೂ ಬಹಳ ವ್ಯತ್ಯಾಸವಿದೆ. ಹೀಗಾಗಿ, ಬುದ್ಧ ಧಮ್ಮದಲ್ಲಿ ಮತಾಂತರ ಪದ ಬಳಕೆ ಮಾಡಬೇಡಿ. ಮತಾಂತರ ಪದಕ್ಕೆ ರಾಜಕೀಯ ತಳುಕು ಹಾಕಿಕೊಂಡಿದೆ. ಜತೆಗೆ, ಧರ್ಮಕ್ಕೂ, ಧಮ್ಮಕ್ಕೂ ಬಹಳ ವ್ಯತ್ಯಾಸವಿದೆ. ಹೀಗಾಗಿ ಧಮ್ಮ ಎಂದೇ ಬಳಕೆ ಮಾಡಬೇಕು. ಬುದ್ಧ ಧಮ್ಮ ವೈಜ್ಞಾನಿಕ ತಳಹದಿಯ ಮೇಲೆ ರೂಪಿತಗೊಂಡಿದೆ.
ಇದನ್ನು ಅಂಬೇಡ್ಕರ್ ಸಹ ಒಪ್ಪುತ್ತಾರೆ. ಈ ಧರ್ಮ ದೈವಿ ಕೇಂದ್ರೀಕೃತವಲ್ಲ. ಮನುಷ್ಯ ಕ್ರಿಯಾಶೀಲತೆಯ ಕೇಂದ್ರೀತವಾಗಿದೆ. ಗೌತಮ ಬುದ್ಧನ ವಿವೇಕ, ಜ್ಞಾನ, ಅನುಭವದ ಆಧಾರಿತವಾಗಿ ಧರ್ಮ ರಚನೆಗೊಂಡಿದೆ. ಹೀಗಾಗಿ, ಅವರು ಎಲ್ಲಿಯೂ ಯಾವ ಗ್ರಂಥಗಳ ಉಲ್ಲೇಖವನ್ನೂ ಮಾಡಿಲ್ಲ ಎಂದರು.
ಶ್ರಮದಿಂದ ಜ್ಞಾನ ಎಂಬುದು ಬುದ್ಧನ ಪ್ರಬಲ ಪ್ರತಿಪಾದನೆ. ಆದರೆ, ಭಾರತದಲ್ಲಿ ಬೌದ್ಧಿಕ ಮತ್ತು ಶ್ರಮವನ್ನು ವಿಭಜನೆ ಮಾಡಲು ಬಳಸಿಕೊಳ್ಳಲಾಗಿದೆ. ಇದು ಜಾತಿ ಆಧಾರಿತ ವಿಭಜನೆಗೂ ಕಾರಣವಾಗಿದೆ. ಸಂವಾದದಿಂದ ಜ್ಞಾನ ಬರುತ್ತದೆಯೇ ಹೊರತು, ತಪಸ್ಸಿನಿಂದ ಜ್ಞಾನ ಬರಲ್ಲ ಎಂದೂ ಬುದ್ಧ ಹೇಳಿದ್ದಾರೆ ಎಂದು ತಿಳಿಸಿದರು.
ಅಂತರಸಂತೆಯ ಸಾರನಾಥ ಬುದ್ಧವಿಹಾರದ ಭಿಕ್ಷುಣಿ ಗೌತಮಿ ಭಂತೇ, ಮೈವಿವಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಮೈವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಡಿ.ಆನಂದ್, ಲೇಖಕ ಸಿದ್ದಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್ ಇನ್ನಿತರರಿದ್ದರು.