

ರಾಯಚೂರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರು ಜಾಗತಿಕ ಮಟ್ಟದ ಮಹಾನ್ ದಾರ್ಶನಿಕರಾಗಿದ್ದಾರೆ. ಇಂದಿನ ಪೀಳಿಗೆಯು ಅವರ ದಾರಿಯಲ್ಲಿ ಸಾಗಬೇಕಾಗಿದೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿರ್ದೇಶನಾಲಯ, ನೌಕರರ ಸಂಘ ವತಿಯಿಂದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗೌತಮ ಬುದ್ಧ ಅವರು ಈ ಸಮಾಜಕ್ಕೆ ಶಾಂತಿ, ಅಹಿಂಸೆಯ ಸಂದೇಶ ನೀಡಿದರು. ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆ ಮಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಸಂದೇಶ ನೀಡಿದವರು ಎಂದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರು ಶೋಷಣೆಗೆ ಒಳಗಾದ ಸಮುದಾಯಗಳನ್ನು ಮೇಲೆತ್ತಿದರು. ಮನುಷ್ಯರನ್ನು ಮನುಷ್ಯರಂತೆ ಕಾಣುವ ಸಂದೇಶ ನೀಡಿದರು ಎಂದು ತಿಳಿಸಿದರು.
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಆದರ್ಶ, ಜೀವನ ಮೌಲ್ಯಗಳನ್ನು ಇಂದಿನ ಯುವ ಸಮೂಹ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ನಡೆ-ನುಡಿ ಒಂದೇ ಇರಬೇಕು. ಮೌಢ್ಯ ತೊಲಗಬೇಕು. ದೇವರ ಹೆಸರಿನಲ್ಲಿ ಮೋಸ ನಡೆಯುವುದು ನಿಲ್ಲಬೇಕು ಎಂಬುದಾಗಿ ಬಸವಣ್ಣನವರು ತಿಳಿಸಿದರು. ಅವಮಾನ ಹಸಿವಿಗಿಂತ ಘೋರ. ಜಾತಿಯ ಕಾರಣಕ್ಕೆ ಅವಮಾನ ಎದುರಿಸುವುದು ನಿಲ್ಲಬೇಕು. ಜಾತಿಯಲ್ಲಿ ಮೇಲು ಕೀಳು ಎಂಬುದು ಇರಬಾರದು ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿದರು ಎಂದರು. ಸಂವಿಧಾನವನ್ನು ಪೂರ್ತಿಯಾಗಿ ಓದಿದಾಗಲೇ ಅದರ ಮಹತ್ವ ತಿಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಕೃಷಿ ವಿವಿಯ ಕುಲಪತಿ ಡಾ.ಎಂ.ಹನುಮಂತಪ್ಪ, ಕುಲ ಸಚಿವ ಡಾ.ಕೆ.ಆರ್.ದುರುಗೇಶ್, ಡೀನ್ ಡಾ.ಗುರುರಾಜ್ ಸುಂಕದ ಸೇರಿ ಅನೇಕರು ಇದ್ದರು.