ಉತ್ಸವಕ್ಕೆ ಸಜ್ಜಾದ ಬೂದನೂರು: ಮಾ.1 ಮತ್ತು 2ರಂದು ಆಚರಣೆ

Budanuru Utsava mandya
Published on

ಮಂಡ್ಯ: ಹೊಯ್ಸಳರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿ ತಾಲೂಕಿನ ಬೂದನೂರಿನಲ್ಲಿ ನೆಲೆಯಾಗಿರುವ ‘ಕಾಶಿ ವಿಶ್ವನಾಥ ಮತ್ತು ಅನಂತಪದ್ಮನಾಭಸ್ವಾಮಿ’ಯ ಉತ್ಸವಕ್ಕೆ ಗ್ರಾಮ ಸಜ್ಜಾಗಿ ನಿಂತಿದೆ. ಅಂತೆಯೇ ಮಾ.2 ಮತ್ತು 3ರಂದು ನಡೆಯಲಿರುವ ವೈಭವಯುತ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಇನ್ನು ಗ್ರಾಮಮಟ್ಟದಲ್ಲಿ ಉತ್ಸವ ಆಯೋಜಿಸುವ ಹೊಸತನಕ್ಕೆ ಶಾಸಕ ರವಿಕುಮಾರ್ ಗಣಿಗ ನಾಂದಿಯಾಡಿದ್ದಾರೆ.
ಉತ್ಸವ ಆಯೋಜಿಸುವ ಸಂಬಂಧ ಕಳೆದ ವರ್ಷ ಶಾಸಕರು ಘೋಷಣೆ ಮಾಡಿದ್ದರು. ಅದರಂತೆ ಜಿಲ್ಲಾಡಳಿತದಿಂದ ಆಚರಣೆ ಮಾಡಲಾಗುತ್ತಿದೆ. ಎರಡು ದಿನ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಚಟುವಟಿಕೆ ರಸದೌತಣ ನೀಡಲಿದ್ದು, ಸರ್ಕಾರದಿಂದ ಲಕ್ಷಾಂತರ ರೂ ಅನುದಾನ ನೀಡಲಾಗಿದೆ.
ಉತ್ಸವ ಪರಿಶೀಲಿಸಿ ಬಳಿಕ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿಯಿಂದ 50 ಲಕ್ಷ ರೂ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 15 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಜಿಲ್ಲಾಡಳಿತ ಹಾಗೂ ನನ್ನ ಸ್ವಂತ ಖರ್ಚಿನಿಂದ ಇತರೆ ಖರ್ಚು ವೆಚ್ಚಗಳನ್ನು ನಿಭಾಯಿಸಲಾಗುತ್ತಿದೆ. 2ರಂದು ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಲಿದ್ದು, ವಿವಿಧ ಕಲಾ ಪ್ರಕಾರಗಳ ಮೆರವಣಿಗೆಯನ್ನು ಗ್ರಾಮದ ಹೆಬ್ಬಾಗಿಲಿನಿಂದ ದೇಗುಲದವರೆಗೆ ಆಯೋಜಿಸಲಾಗಿದೆ. ಅಂತೆಯೇ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಿದ್ದಾರೆ ಎಂದರು.
3ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಸ್ಥಳೀಯ ಕಲಾವಿದರಿಂದ 1 ಗಂಟೆಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕೆ 10 ರಿಂದ 15 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 8 ಸಾವಿರ ಜನರಿಗೆ ಆಸನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದ ವೇಳೆ ಐತಿಹಾಸಿಕ ದೇಗುಲಗಳನ್ನು ಸಂದರ್ಶಿಸುವ ಅವಕಾಶವಿದ್ದು, ಹೊಸಬೂದನೂರು ಗ್ರಾಮದ ಎರಡು ದೇಗುಲಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು. ತಾಲೂಕಿನ ಬಸರಾಳು ಗ್ರಾಮದಲ್ಲಿ ಮಲ್ಲಿಕಾರ್ಜುನಸ್ವಾಮಿ ದೇವಾಲಯ ಹಾಗೂ ಕೆರಗೋಡು ಗ್ರಾಮದಲ್ಲಿರುವ ಪಂಚಲಿಂಗೇಶ್ವರ ದೇಗುಲಗಳು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಆ ದೇವಸ್ಥಾನದ ಪರಂಪರೆಯನ್ನು ಬಿಂಬಿಸಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ವಿಶೇಷವಾಗಿ ವೇದಿಕೆ ಕಾರ್ಯಕ್ರಮದಲ್ಲಿ ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ 16 ಜನ ಅರ್ಚಕರ ನೇತೃತ್ವದಲ್ಲಿ ಗಂಗಾರತಿ ನಡೆಯಲಿದೆ. ಈ ಮೂಲಕ ಜಿಲ್ಲೆ ಹಾಗೂ ರಾಜ್ಯದಲ್ಲಿ ಆವರಿಸಿರುವ ಬರಗಾಲದ ಬೇಗುದಿಗೆ ಅಂತ್ಯವಾಡಿ ವರುಣನ ಕೃಪೆ ಕೇಳಲು ಪ್ರಾರ್ಥಿಸಲಾಗುವುದು. 2ರಂದು ಸಂಗೀತ ನಿರ್ದೇಶಕ ಸಾಧು ಕೋಕಿಲ ತಂಡದಿಂದ ರಸ ಮಂಜರಿ ಕಾರ್ಯಕ್ರಮ ಹಾಗೂ ಸಾಮೂಹಿಕ ನೃತ್ಯ ಪ್ರದರ್ಶನ ನಡೆಯಲಿದ್ದು, ಕಿರುತೆರೆ ಹಾಗೂ ಹಿರಿತೆರೆಯ ಅನೇಕ ನಟ-ನಟಿಯರು ಭಾಗಿಯಾಗಲಿದ್ದಾರೆ. ಮಾ.3ರಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿದೆ. ಕಾರ್ಯಕ್ರಮ ಆಯೋಜನೆಗೆ 40*100 ಅಡಿ ಅಳತೆಯ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದ್ದು, ವಾಹನ ನಿಲುಗಡೆ ಜತೆಗೆ 40 ಮಳಿಗೆಗಳಲ್ಲಿ ಆಹಾರ ಮೇಳ ಆಯೋಜಿಸಲಾಗುವುದು ಎಂದು ವಿವರಿಸಿದರು.
ಗ್ರಾ.ಪಂ ಅಧ್ಯಕ್ಷೆ ಮಾನಸಾ, ಉಪಾಧ್ಯಕ್ಷ ಜಯಶಂಕರ್, ಸದಸ್ಯ ಕೆಂಪೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ, ಮುಖಂಡರಾದ ಬಿ.ಟಿ.ಚಂದ್ರಶೇಖರ್, ಜಯರಾಮು, ಶೇಖರ್, ಶಿವಕುಮಾರ್ ಇತರರಿದ್ದರು.

ಪಸರಿಸಲಿದೆ ಧಾರ್ಮಿಕತೆ
ನಮ್ಮ ಪೂರ್ವಿಕರ ಧಾರ್ಮಿಕತೆಯ ಸೊಗಡನ್ನು ರಾಜ್ಯ ಹಾಗೂ ರಾಷ್ಟ್ರ ವ್ಯಾಪಿ ವಿಸ್ತರಿಸಲು ಪ್ರಥಮವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಉತ್ಸವವನ್ನು ಆಚರಿಸಲಾಗುತ್ತಿದೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಎರಡು ಪುರಾತನ ದೇಗುಲಗಳ ನಿರ್ಮಾಣದ ಹಿಂದೆ ಐತಿಹಾಸಿಕ ಅಥವಾ ಪೌರಾಣಿಕ ಹಿನ್ನೆಲೆ ಇರುವ ಕುರಿತು ಸಂಶೋಧಕರಿಂದ ಸಂಶೋಧನೆ ನಡೆಸಿ ವಾಸ್ತವತೆಯನ್ನು ತಿಳಿಯಲಾಗುವುದು ಎಂದು ರವಿಕುಮಾರ್ ಗಣಿಗ ತಿಳಿಸಿದರು.
ಕೇರಳದ ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಜಿಲ್ಲೆಯ ಹೊಸಬೂದನೂರಿನಲ್ಲಿ ಮಾತ್ರ ದೇವಾಲಯ ನಿರ್ಮಾಣವಾಗಿದೆ. ಅನಂತ ಪದ್ಮನಾಭ ದೇಗುಲದಲ್ಲಿ ಇಂದಿಗೂ ಹತ್ತಾರು ಅಡಿ ಉದ್ದದ ನಾಗರಹಾವು ಕಾಣಿಸಿಕೊಳ್ಳುವುದು ಧಾರ್ಮಿಕತೆಯನ್ನು ಬಿಂಬಿಸುತ್ತದೆ. ಗ್ರಾಮದ ಎರಡು ದೇಗುಲಗಳ ವಾಸ್ತುಶಿಲ್ಪದ ಶ್ರೀಮಂತಿಕೆ ಹಾಗೂ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಇವುಗಳ ಪ್ರಸಿದ್ಧತೆಯನ್ನು ಪಸರಿಸಲು ’ಬೂದನೂರು ಉತ್ಸವ’ ಸಹಕಾರಿಯಾಗಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net