ಬೂದನೂರು ಉತ್ಸವಕ್ಕೆ ಕ್ಷಣಗಣನೆ: ಮಧುವಣಗಿತ್ತಿಯಂತೆ ಸಜ್ಜಾಗಿರುವ ಗ್ರಾಮ

Budanuru Festival mandya
Published on

ಮಂಡ್ಯ: ತಾಲೂಕಿನ ಬೂದನೂರು ಗ್ರಾಮದಲ್ಲಿ ‘ಕಾಶಿ ವಿಶ್ವನಾಥ ಮತ್ತು ಅನಂತಪದ್ಮನಾಭಸ್ವಾಮಿ’ಯ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾ.2 ಮತ್ತು 3ರಂದು ನಡೆಯಲಿರುವ ವೈಭವಯುತ ಕಾರ್ಯಕ್ರಮಕ್ಕೆ ಗ್ರಾಮ ಮಧುವಣಗಿತ್ತಿಯಂತೆ ಸಜ್ಜಾಗುತ್ತಿದೆ.
ಸಾಮಾನ್ಯವಾಗಿ ನಗರ, ಪಟ್ಟಣಗಳಲ್ಲಿ ಉತ್ಸವ ನಡೆಯುತ್ತದೆ. ಆದರೆ ಈ ಬಾರಿ ಗ್ರಾಮಮಟ್ಟದಲ್ಲಿ ಆಯೋಜನೆ ಮಾಡಿದ್ದು, ಹೊಯ್ಸಳರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿರುವ ಬೂದನೂರು ಈ ಉತ್ಸವದೊಂದಿಗೆ ಇತಿಹಾಸದ ಪುಟದಲ್ಲಿ ದಾಖಲಾಗಲಿದೆ. ಇನ್ನು ಎರಡು ದಿನ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಚಟುವಟಿಕೆ ಜನರಿಗೆ ರಸದೌತಣ ನೀಡಲಿದೆ.
ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಕನ್ನಡ ಮತ್ತು ಸಂಸ್ಕೃತಿಯಿಂದ 50 ಲಕ್ಷ ರೂ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 15 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಜಿಲ್ಲಾಡಳಿತ ಹಾಗೂ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಉತ್ಸವ ನಡೆಯುತ್ತಿದೆ. ಪೂರ್ವಿಕರ ಧಾರ್ಮಿಕತೆಯ ಸೊಗಡನ್ನು ರಾಜ್ಯ ಹಾಗೂ ರಾಷ್ಟ್ರ ವ್ಯಾಪಿ ವಿಸ್ತರಿಸಲು ಪ್ರಥಮವಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಉತ್ಸವ ಆಚರಿಸಲಾಗುತ್ತಿದೆ. ಗ್ರಾಮದಲ್ಲಿರುವ ಎರಡು ಪುರಾತನ ದೇಗುಲಗಳ ನಿರ್ಮಾಣದ ಹಿಂದೆ ಐತಿಹಾಸಿಕ ಹಿನ್ನೆಲೆ ಇರುವ ಕಾರಣ ಉತ್ಸವ ಮಾಡಲಾಗುತ್ತಿದೆ.
ಪ್ರಮುಖವಾಗಿ ಕೇರಳದ ತಿರುವನಂತಪುರದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಜಿಲ್ಲೆಯ ಹೊಸಬೂದನೂರಿನಲ್ಲಿ ಮಾತ್ರ ದೇವಾಲಯ ಇದೆ. ಈ ಅನಂತ ಪದ್ಮನಾಭ ದೇಗುಲದಲ್ಲಿ ಇಂದಿಗೂ ಹತ್ತಾರು ಅಡಿ ಉದ್ದದ ನಾಗರಹಾವು ಕಾಣಿಸಿಕೊಳ್ಳುತ್ತದೆ ಎನ್ನುವುದಿದೆ. ಕಾಶಿ ವಿಶ್ವೇಶ್ವರ ಹಾಗೂ ಅನಂತಪದ್ಮನಾಭ ದೇವಾಲಯ ವಾಸ್ತುಶಿಲ್ಪ ಜನರನ್ನು ಸೆಳೆಯುತ್ತಿದೆ. ಈ ಕಾರಣಕ್ಕೆ 1961ರ 3ನೇ ಪ್ರಕರಣದ ಮೇರೆಗೆ ಸಂರಕ್ಷಿಸಲ್ಪಟ್ಟ ಪ್ರಾಚೀನ ಸ್ಥಳವೆಂದು ಘೋಷಣೆ ಮಾಡಲಾಗಿದೆ. ಮಾತ್ರವಲ್ಲದೆ ಈ ದೇವಸ್ಥಾನಗಳ ಯಾವುದೇ ಭಾಗವನ್ನು ನಾಶಗೊಳಿಸಿದರೆ ಅಥವಾ ಬದಲಾಯಿಸಿದರೆ ಶಿಕ್ಷೆಗೆ ಗುರಿಪಡಿಸುವುದಾಗಿ ಮೈಸೂರಿನ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ ಎಚ್ಚರಿಕೆ ನೀಡಿದೆ.

ಸಾವಿರಾರೂ ಜನರ ಆಗಮನದ ನಿರೀಕ್ಷೆ: ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕೆ 10 ರಿಂದ 15 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ 8 ಸಾವಿರ ಜನರಿಗೆ ಆಸನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ಸವ ಯಶಸ್ವಿಗೊಳಿಸಲು ಪ್ರತ್ಯೇಕ ಸಮಿತಿ ರಚನೆ ಮಾಡಿ ಉಸ್ತುವಾರಿಗಳನ್ನು ನಿಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಗೆ 40*100 ಅಡಿ ಅಳತೆಯ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶ ಮಾಡಲಾಗಿದೆ. ಇದಲ್ಲದೆ 40 ಮಳಿಗೆಗಳಲ್ಲಿ ಆಹಾರ ಮೇಳ ಇರಲಿದೆ.
ಸೆಲ್ಫಿ ಪಾಯಿಂಟ್: ಬೂದನೂರು ಉತ್ಸವದ ಬಗ್ಗೆ ಈಗಾಗಲೇ ವ್ಯಾಪಕ ಪ್ರಚಾರ ನಡೆಸಲಾಗಿದೆ. ಈ ನಡುವೆ ಜನರನ್ನು ಇನ್ನಷ್ಟು ಸೆಳೆಯುವ ಉದ್ದೇಶದಿಂದ ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತ ಹಾಗೂ ಫ್ಯಾಕ್ಟರಿ ವೃತ್ತದಲ್ಲಿ ಸೆಲ್ಫಿ ಪಾಯಿಂಟ್ ಅಳವಡಿಸಲಾಗಿದೆ. ಬೃಹದಾಕಾರದ ಆನೆಗಳ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net