

ಮಂಡ್ಯ: ಫೆಬ್ರವರಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಬೂದನೂರು ಉತ್ಸವ ಮಾಡಲು ನಿರ್ಧರಿಸಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ತಾಲೂಕಿನ ಹೊಸಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿದ ಮಾತನಾಡಿದ ಅವರು, ಗ್ರಾಮದಲ್ಲಿ ಅನಂತಪದ್ಮನಾಭ ದೇವಾಲಯ ಮತ್ತು ಕಾಶಿ ವಿಶ್ವನಾಥ ದೇವಾಲಯ ಹಾಗೂ ದೊಡ್ಡ ಕರೆ ಇರುವುದರಿಂದ ಬೂದನೂರು ಉತ್ಸವ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡುತ್ತದೆ ಎನ್ನುವುದರ ಮೇಲೆ ಉಳಿದ ಅನುದಾನ ಹಾಕಿಕೊಂಡು ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದು. ಹೊಸಬೂದನೂರಿನಲ್ಲಿ ಸೊಸೈಟಿ ಕಟ್ಟಡ ಉದ್ಘಾಟಿಸಲಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ದೊಡ್ಡ ಸಭಾಂಗಣವು ಇರುವುದರಿಂದ ಮತ್ತಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ಸೊಸೈಟಿ ಅಧ್ಯಕ್ಷ ಬಿ.ಎಸ್.ಮಂಜು ಮಾತನಾಡಿ, ಕಟ್ಟಡದ ನಿರ್ಮಾಣಕ್ಕೆ ಸಂಸದೆ 5 ಲಕ್ಷ ರೂ ಹಾಗೂ ಅಫೆಕ್ಸ್ ಬ್ಯಾಂಕ್ ನಿರ್ದೇಶಕ ಅಶ್ವಥ್ 5 ಲಕ್ಷ ರೂ ನೀಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್(ಶಿವಪ್ಪ), ಸೊಸೈಟಿ ಉಪಾಧ್ಯಕ್ಷ ಗೋಪಾಲಯ್ಯ, ನಿರ್ದೇಶಕರಾದ ಪಿ.ಎನ್.ರಘು, ಚಿಕ್ಕಬೋರಯ್ಯ, ಬಿ.ಎಲ್.ಲಿಂಗರಾಜು, ರಾಮರಾಜು, ಬಿ.ಸಿ.ರಾಜಶೇಖರ್ ಇತರರಿದ್ದರು.