

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಇಲ್ಲಿನ ಮಹಾನಗರ ಪಾಲಿಕೆ ಮತ್ತು ಹೊರ ವಲಯದ ಪ್ರದೇಶಗಳಲ್ಲಿನ ಅನಧಿಕೃತ ಬಡಾವಣೆಗಳನ್ನು ಗುರುವಾರ ತೆರವುಗೊಳಿಸುವ ಮೂಲಕ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ನಗರದ ಹೊರವಲಯದ ಪೀರನವಾಡಿ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿ ನಿರ್ಮಿಸಲಾಗಿದ್ದ ನಾಲ್ಕು ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.ಈ ಬಡಾವಣೆಗಳಿಗೆ ಜಿಲ್ಲಾಧಿಕಾರಿಗಳು ಎನ್‌ಎ ಅನುಮತಿ ನೀಡಿಲ್ಲ. ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ. 100 ರೂ. ಬಾಂಡ್ ಪೇಪರ್ ಆಧಾರದ ಮೇಲೆ ನಿವೇಶನಗಳನ್ನು ಮಾರಾಟ ಮಾಡುತ್ತಿರುವ ಹಿನ್ನೆಲೆ ಬುಡಾ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಗಳ ಚಳಿ ಬಿಡಿಸಿದೆ.
ಈಗಾಗಲೇ ನಗರದ ವಿವಿಧ ಕಡೆ ಎನ್‌ಎ ಮಾಡಿಕೊಳ್ಳದೆ 60ಕ್ಕೂ ಅಧಿಕ ಅಕ್ರಮ ಬಡವಾಣೆಗಳಲ್ಲಿ ನಿವೇಶನಗಳನ್ನು 100 ರೂ. ಬಾಂಡ್ ಪೇಪರ್ ಆಧಾರದ ಮೇಲೆ ಜನರಿಗೆ ಮಾರಾಟ ಮಾಡಿದ್ದಾರೆ. ಈ ಬಡಾವಣೆಗಳಿಗೆ ವಿದ್ಯುತ್, ಕುಡಿಯುವ ನೀರು, ರಸ್ತೆ,ಚರಂಡಿ ಸೇರಿದಂತೆ ಇತರೆ ಸೌಲಭ್ಯಗಳು ಇಲ್ಲ. ನಗರದ ಹೊರ 15 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಬಡಾವಣೆ ನಿರ್ಮಾಣಕ್ಕೆ ಬುಡಾದಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಬುಡಾ ಅಧಿಕಾರಿಗಳು ತಿಳಿಸಿದ್ದಾರೆ.
...........
ಕೋಟ್ಸ್
ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿ ಇತರೆ ಮೂಲಭೂತ ಸೌಲಭ್ಯಗಳನ್ನು ಇಲ್ಲದಿರುವ ಅನಧಿಕೃತ ಬಡಾವಣೆಗಳ ವಿರುದ್ಧ ನಿರಂತರ ಕಾರ್ಯಚರಣೆ ಕೈಗೊಳ್ಳಲಾಗಿದೆ. ಪೀರನವಾಡಿಯಲ್ಲಿ ನಾಲ್ಕು ಬಡಾವಣೆಗಳನ್ನು ತೆರವುಗೊಳಿಸಿ ವಶಪಡಿಸಿಕೊಳ್ಳಲಾಗಿದೆ.
- - ಶಕೀಲ ಅಹ್ಮದ್, ಬುಡಾ ಆಯುಕ್ತ