ಗ್ರಾಮಸಭೆಗೆ ಬಾರದ ಅಧಿಕಾರಿಗಳು, ಬು. ಅರಳಿಕಟ್ಟಿ ಗ್ರಾಮಸ್ಥರ ಆಕ್ರೋಶ

IMG-20240814-WA0019.jpg
Published on

ಹುಬ್ಬಳ್ಳಿ: ತಾಲೂಕಿನ ಬು. ಅರಳಿಕಟ್ಟಿಯಲ್ಲಿ ನಿಗದಿಯಾಗಿದ್ದ ಗ್ರಾಮ ಸಭೆಗೆ ಬಾರದೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬು. ಅರಳಿಕಟ್ಟಿ ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ಆ. 13ರಂದು ಬೆಳಗ್ಗೆ 11ಕ್ಕೆ ಗ್ರಾಮ ಸಭೆ ನಿಗದಿಯಾಗಿತ್ತು. ಈ ಬಗ್ಗೆ ಊರಲ್ಲಿ ಡಂಗುರ ಸಾರಲಾಗಿತ್ತು. ವಿವಿಧ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು.
ಸರ್ಕಾರದ ಅಭಿವೃದ್ಧಿ ಯೋಜನೆಗಳ ಮಾಹಿತಿ ಪಡೆಯಲು ಹಾಗೂ ವಿವಿಧ ಫಲಾನುಭವಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗ್ರಾಮಸಭೆಗೆ ಹಾಜರಾಗಿದ್ದರು.

ಆದರೆ, ಸುಮಾರು 27 ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಪೈಕಿ ಕೇವಲ 6 ಜನರು ಸಭೆಗೆ ಬಂದಿದ್ದರು. ಇದರಿಂದ ಗ್ರಾಮಸ್ಥರಿಗೆ ತೀವ್ರ ನಿರಾಸೆಯಾಯಿತು.

ಬು. ಅರಳಿಕಟ್ಟಿ ಗ್ರಾಮದಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಮಾಹಿತಿ ಹಂಚಿಕೆ ಆಗಬೇಕಿತ್ತು. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಸೂಚಿಸಬೇಕಿತ್ತು. ಯೋಜನೆಗಳ ಬಗ್ಗೆ ತಿಳಿವಳಿಕೆ ನೀಡಬೇಕಾದ ಅಧಿಕಾರಿಗಳೇ ಬರಲಿಲ್ಲ. ಇದರಿಂದ ಎಲ್ಲರೂ ಬೇಸರಗೊಂಡರು ಎಂದು ಗ್ರಾಪಂ ಉಪಾಧ್ಯಕ್ಷ ಲಿಂಗರಾಜ ಮೆಣಸಿನಕಾಯಿ ತಿಳಿಸಿದರು.

ಗ್ರಾಮವೊಂದರ ಅಗತ್ಯಗಳನ್ನು ಪೂರೈಸುವ ಸಭೆಯನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಭೆ ಮುಂದೂಡಿಕೆ: ಗ್ರಾಮಸಭೆಗೆ ಅಧಿಕಾರಿಗಳು ಭಾರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಭೆ ನಿಗದಿ ಮಾಡಲಾಗುವುದು ಎಂದು ಅರಳಿಕಟ್ಟಿ ಗ್ರಾಪಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net