ಟೆಕ್‌ ಸಮಿಟ್‌ನಲ್ಲಿ ವರ್ಚುಯಲ್‌ ವಿಶ್ವರೂಪ!

Published on

ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ರಾಜ್ಯ ಕರ್ನಾಟಕವು, ಕೋವಿಡ್-‌19 ಬಿಕ್ಕಟ್ಟಿನ ನಡುವೆಯೂ ಹಮ್ಮಿಕೊಂಡಿರುವ ಬೆಂಗಳೂರು ಟೆಕ್‌ ಸಮಿಟ್-‌2020 ಅನೇಕ ಕಾರಣಗಳಿಗೆ ಮಹತ್ವದ್ದೆನಿಸಿದ್ದು, ಜಗತ್ತೇ ಒಂದು ಗ್ರಾಮ ಎನ್ನುವ ಪರಿಕಲ್ಪನೆಯನ್ನು ಮತ್ತಷ್ಟು ವಿಸ್ತಾರಗೊಳಿಸಿದೆ.

25ಕ್ಕೂ ಹೆಚ್ಚು ದೇಶಗಳನ್ನು ಒಂದೇ ಒಂದು ವರ್ಚುಯಲ್ ವೇದಿಕೆಯಲ್ಲಿ ಒಗ್ಗೂಡಿಸಿ ತಂತ್ರಜ್ಞಾನದ ವಿಶ್ವರೂಪವನ್ನು ಜಗತ್ತಿಗೆ ಪರಿಚಯಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟೆಕ್‌ ಸಮಿಟ್-2020 ಚಾಲಕಶಕ್ತಿ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, "ಇದೊಂದು ಅಸಾಧಾರಣ ಹೆಜ್ಜೆ. ಕೋವಿಡ್‌ನಂಥ ಮಾರಕ ಪಿಡುಗಿನ ನಡುವೆಯೇ ಈ ಶೃಂಗವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್‌ ನಂತರ ರಾಜ್ಯವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಬೇಕು ಎಂಬ ನಮ್ಮ ಸಂಕಲ್ಪಕ್ಕೆ ಸಾಕ್ಷಿಯಾಗಿ ಈ ಟೆಕ್‌ ಸಮಿಟ್‌ ಬಂದಿದೆ. ತಂತ್ರಜ್ಞಾನ ನಮ್ಮ ಇಚ್ಛಾಶಕ್ತಿಗೆ ಬಲ ತುಂಬಿದೆ" ಎನ್ನುತ್ತಾರೆ.

"ಸಾಮಾನ್ಯವಾಗಿ ಈ ರೀತಿಯ ಟೆಕ್‌ ಸಮಿಟ್‌ಗಳನ್ನು ನೇರ ವೇದಿಕೆಗಳಲ್ಲಿ ಆಯೋಜಿಸಲಾಗುತ್ತದೆ. ಪ್ರತಿವರ್ಷ ನಡೆಯುತ್ತಿದ್ದ ಈ ಸಮಿಟ್‌ಗೆ ವಿವಿಧ ದೇಶಗಳಿಂದ ಪ್ರತಿನಿಧಿಗಳು, ಜಾಗತಿಕ ನಾಯಕರು ಬಂದು ಭಾಗಿಯಾಗುತ್ತಿದ್ದರು. ಆದರೆ, ಈ ವರ್ಷ ಕೋವಿಡ್‌ ಅಂತಹ ಸಾಂಪ್ರದಾಯಿಕ ವೇದಿಕೆಗಳಿಗೆ ತಿಲಾಂಜಲಿ ನೀಡಿ ಹೊಸ ಸಾಧ್ಯತೆಗಳು ತೆರೆದುಕೊಳ್ಳುವಂತೆ ಮಾಡಿದೆ" ಎನ್ನುತ್ತಾರೆ ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ.

ಟೆಕ್‌ ಸಮಿಟ್‌ನಲ್ಲಿ ಮೂರು ದಿನಗಳ ಕಾಲ ವಿವಿಧ ವರ್ಚುಯಲ್‌ ವೇದಿಕೆಗಳಲ್ಲಿ ನಡೆಯುತ್ತಿರುವ ಚರ್ಚಾಗೋಷ್ಠಿಗಳಲ್ಲಿ ದೇಶ-ವಿದೇಶಗಳ ಹೂಡಿಕೆದಾರರು, ತಾಂತ್ರಿಕ ನಿಪುಣರು, ವಿವಿಧ ಕಂಪನಿಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಮೊದಲ ದಿನ ನವೆಂಬರ್‌ 19ರಂದು ಮಹೀಂದ್ರಾ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್‌ ಮಹೀಂದ್ರ ಮುಖ್ಯ ಭಾಷಣ ಮಾಡಿದರಲ್ಲದೆ, ಕೋವಿಡ್‌ ನಂತರದ ಕಾಲದಲ್ಲಿ ಕರ್ನಾಟಕ ಮತ್ತು ಭಾರತದಲ್ಲಿರುವ ಹೂಡಿಕೆ ಅವಕಾಶಗಳ ಬಗ್ಗೆ, ಮುಖ್ಯವಾಗಿ ಆಟೋಮೊಬೈಲ್‌ ಕ್ಷೇತ್ರದ ಬೆಳವಣಿಗೆ ಮೇಲೆ ಬೆಳಕು ಚೆಲ್ಲಿದರು.

ಒಟ್ಟು 75 ಅಧಿವೇಶನಗಳಲ್ಲಿ ಸುಮಾರು 270 ಮಂದಿ ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಆವಿಷ್ಕಾರ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುಮಾರು 100ಕ್ಕೂ ಹೆಚ್ಚು ನವೋದ್ಯಮಗಳು ಸೇರಿದಂತೆ 250 ಪ್ರದರ್ಶನಗಳನ್ನು ಕೂಡ ಏರ್ಪಡಿಸಲಾಗಿದೆ. ಮತ್ತೊಂದು ದೊಡ್ಡ ದಾಖಲೆ ಎನ್ನುವಂತೆ ವಿವಿಧ ದೇಶಗಳ 4000ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಬಿಸಿನೆಸ್‌ ವಿಸಿಟರುಗಳು ವರ್ಚುವಲ್‌ ವೇದಿಕೆಯ ಮೂಲಕವೇ ಸಮಿಟ್‌ಗೆ ಭೇಟಿ ನೀಡುತ್ತಿದ್ದಾರೆ.

ಇದೇ ಮೊದಲ ಸಲ ವರ್ಚ್ಯುಯಲ್ ಆಗಿ ನಡೆದ ‘ಬೆಂಗಳೂರು ತಂತ್ರಜ್ಞಾನ ಮೇಳ-2020’ ಕ್ಕೆ ಮೊದಲ ದಿನವಾದ ಗುರುವಾರ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಬಿಟಿಎಸ್-2020 ಆನ್ ಲೈನ್ ವೇದಿಕೆಯೊಂದರಲ್ಲೇ 7000 ವ್ಯಾಪಾರೋದ್ಯಮಿಗಳು ನೋಂದಣಿ ಮಾಡಿ ಪಾಲ್ಗೊಂಡರು. ಇದಲ್ಲದೇ ಇತರ 10,000 ಜನರು ಇದೇ ವೇದಿಕೆ ಮೂಲಕ ಆಸಕ್ತಿಯಿಂದ ಭಾಗವಹಿಸಿದರು. ಒಟ್ಟಾರೆ ಈ ವೇದಿಕೆ ಮೂಲಕ ಪಾಲ್ಗೊಂಡವರ ಸಂಖ್ಯೆ 17,000 ದಾಟಿದೆ. ಕಳೆದ ವರ್ಷ ಮೂರು ದಿನಗಳೂ ಸೇರಿ ಪಾಲ್ಗೊಂಡ ವ್ಯಾಪಾರೋದ್ಯಮಿಗಳ ಸಂಖ್ಯೆ 3,000 ಇತ್ತು. ಇದಲ್ಲದೇ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಕೂಡ 2 ಕೋಟಿಗೂ ಹೆಚ್ಚು ಜನರನ್ನು ಇದು ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net