ಬೆಂಗಳೂರು: ಭಾರತದಂತಹ ಕೃಷಿ ಆಧಾರಿತ ದೇಶದಲ್ಲಿ ಸಣ್ಣ ಸಣ್ಣ ಹಿಡುವಳಿದಾರರು ಕೂಡ ಡ್ರೋನ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವಂತಾಗಬೇಕು ಎಂದು ದೇಶೀಯ ಲಘು ಯುದ್ಧ ವಿಮಾನ ನಿರ್ಮಾಣದ ರೂವಾರಿ ಕೋಟಾ ಹರಿನಾರಾಯಣ ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ ಗುರುವಾರ ಆರಂಭವಾದ ಬೆಂಗಳೂರು ತಂತ್ರಜ್ಞಾನ ಮೇಳ (ಬಿಟಿಎಸ್-2020)ದ ಭಾಗವಾಗಿ ನಡೆದ ವರ್ಚುವಲ್ ಸಂವಾದದಲ್ಲಿ ಆರೋಗ್ಯ, ಕೃಷಿ ಮತ್ತು ವಿಪತ್ತುಗಳ ನಿರ್ವಹಣೆಯಲ್ಲಿ ಡ್ರೋನ್ ಮತ್ತು ರೊಬೋಟ್‌ಗಳು ವಹಿಸುತ್ತಿರುವ ನಿರ್ಣಾಯಕ ಪಾತ್ರಗಳ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇತ್ತೀಚಿನ ವರ್ಷಗಳಲ್ಲಿ ಡ್ರೋನ್ ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸ ಆವಿಷ್ಕಾರಗಳಾಗಿವೆ. ಇದರಿಂದಾಗಿ ರೈತರು ದೊಡ್ಡ ಪ್ರಮಾಣದಲ್ಲಿಯೇ ಡ್ರೋನ್ ಬಳಕೆ ಮಾಡಲು ಸಾಧ್ಯವಾಗುತ್ತಿದೆ. ಆದರೆ ಎರಡು-ಮೂರು ಎಕರೆ ಜಮೀನು ಹೊಂದಿರುವ ರೈತರು ಕೂಡ ಈ ತಂತ್ರಜ್ಞಾನವನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ಬಳಸುವಂತಾಗಬೇಕು. ಆ ರೀತಿಯಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದರು.
ರೈತರು ತಮ್ಮ ಹೊಲಗಳಿಗೆ ಕೀಟನಾಶಕಗಳನ್ನು ಸಿಂಪಡಣೆ ಮಾಡಲು ತಕ್ಕ ಹಾಗೆ ಡ್ರೋನ್‌ಗಳನ್ನು ಸುಧಾರಣೆ ಮಾಡಲಾಗಿದೆ. ನೋಝಲ್ ತಂತ್ರಜ್ಞಾನವೂ ಸಾಕಷ್ಟು ಸುಧಾರಣೆ ಕಂಡಿದೆ. ಕೀಟನಾಶಕ, ಕ್ರಿಮಿನಾಶಕದ ಹನಿಗಳು ಹೊಲದ ನಿರ್ದಿಷ್ಟ ಜಾಗದಲ್ಲಿಯೇ ಬೀಳುವ ಹಾಗೆ ಮಾಡಿದರೆ ಸಣ್ಣ ಹಿಡುವಳಿದಾರರಿಗೆ ಹೆಚ್ಚಿನ ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ ಎಂದು ಅವರು ಸಲಹೆ ನೀಡಿದರು.
ಉಪಗ್ರಹಗಳು ಅತ್ಯುತ್ತಮವಾದ ಚಿತ್ರಗಳನ್ನು ಕಳಿಸುವಂತಹ ಈ ಕಾಲದಲ್ಲಿ ಡ್ರೋನ್‌ಗಳು ಕೂಡ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಸಾಧ್ಯವಾದಷ್ಟು ತ್ವರಿತವಾಗಿ ನೀಡುವ ಅಗತ್ಯವಿದೆ. ಇದರಿಂದ ರೈತರಿಗೆ ತುಂಬ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಡ್ರೋನ್‌ಗೆ ಬಳಸುವ ಆರ್‌ಜಿಬಿ ಕ್ಯಾಮರಾಗಳು, ಬಹುವರ್ಣ ಪಟಲಗಳ (ಮಲ್ಟಿಸ್ಪೆಕ್ಟ್ರಂ) ಕ್ಯಾಮರಾಗಳನ್ನು ಕಡಿಮೆ ಬೆಲೆಯಲ್ಲಿ ಬಳಸಲು ಸಾಧ್ಯವಾಗಬೇಕು ಎಂದು ನುಡಿದರು.