

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಗುಡುಗು ಸಹಿತ ಜೋರು ಮಳೆ ಸುರಿಯಿತು.ಬೆಟ್ಟದಪುರ, ಅತ್ತಿಗೋಡು, ನಾಗನಹಳ್ಳಿ, ಬೆಟ್ಟದತುಂಗ, ಗೊರಹಳ್ಳಿ, ಹರದೂರು, ಆನಿವಾಳು, ಚಪ್ಪರದಹಳ್ಳಿ, ಹಾರನಹಳ್ಳಿ, ಸುರಗಳ್ಳಿ, ಹಲಗನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಗುಡುಗು ಸಹಿತ ವರುಣನ ಆರ್ಭಟ ಜೋರಾಗಿತ್ತು. ಕಳೆದ 15 ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಧಾರಾಕಾರ ಸುರಿದ ಮಳೆಯಿಂದಾಗಿ ರೈತರ ಜಮೀನುಗಳು ಸೇರಿದಂತೆ ರಸ್ತೆಗಳು ಜಲಾವೃತಗೊಂಡು ಹಾಳಾಗಿದ್ದವು. ಬಳಿಕ ಕಳೆದ ನಾಲ್ಕೈದು ದಿನಗಳಿಂದ ಮಳೆಯಿಂದ ಬಿಡುವು ಸಿಕ್ಕ ಹಿನ್ನೆಲೆ ರೈತರು ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದರು. ಆದರೆ ಮತ್ತೆ ಮಳೆರಾಯನ ಆಗಮನದಿಂದ ರೈತರಲ್ಲಿ ಒಂದು ಕಡೆ ಆತಂಕ ಮನೆ ಮಾಡಿದೆ.