

ಬೆಟ್ಟದಪುರ: ಗಿಡಗಳನ್ನು ನೆಟ್ಟು ಸಂರಕ್ಷಿಸುವ ಮೂಲಕ ಉತ್ತಮ ಪರಿಸರ ಕಾಪಾಡಬೇಕು ಎಂದು ನೀನಾಸಂ ರಂಗಭೂಮಿ ಕಲಾವಿದ ಭರಮಣ್ಣ ಬೆಟಗೇರಿ ಹೇಳಿದರು. ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತಿಚ್ಚೇಗೆ ಆಯೋಜಿಸಿದ ವಿಶ್ವಪರಿಸರ ದಿನಾಚರಣೆಯಲ್ಲಿ ಗಿಡನೆಟ್ಟು ಮಾತನಾಡಿದರು.
ಗಿಡಮರ ಸರಂಕ್ಷಣೆಯಲ್ಲಿ ಸಾಲುಮರದ ತಿಮ್ಮಕ್ಕ ನಮಗೆ ಮಾದರಿಯಾಗಿದ್ದಾರೆ. ಪರಿಸರಕ್ಕೆ ನೀಡಿದ ಕೊಡುಗೆ ಮೂಲಕ ತಿಮ್ಮಕ್ಕ ಇಂದು ವಿಶ್ವವಿದ್ಯಾಲಯ ರೂಪಿಸುವ ಮಟ್ಟಕ್ಕೆ ಏರಿದ್ದಾರೆ. ವಿದ್ಯಾರ್ಥಿಗಳು ಪ್ರತಿ ವರ್ಷ ಒಂದೊಂದು ಗಿಡ ನೆಡುವ ಮೂಲಕ ತಾವಿರುವ ಜಾಗವನ್ನೇ ಹಸಿರು ವಲಯವನ್ನಾಗಿ ರೂಪಿಸಬೇಕು. ಪರಿಸರಕ್ಕೆ ಉತ್ತಮ ಕೊಡುಗೆ. ನೀಡಬೇಕು ಎಂದರು.
ಕಾಲೇಜಿನ ಕಾರ್ಯದರ್ಶಿ ಡಾ.ಜೆ ಸೋಮಣ್ಣ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ಜನಸಂಖ್ಯಾ ಪ್ರಮಾಣ ಬಹಳ ಮುಖ್ಯವಾಗಿದೆ. ರಸ್ತೆ, ಮನೆ, ದೇವಾಲಯಗಳ ನಿರ್ಮಾಣಕ್ಕೆ ಮರಗಳನ್ನು ಕಡಿದು ನಾಶ ಮಾಡಲಾಗುತ್ತಿದೆ. ಏರುತ್ತಿರುವ ಜನ ಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಪರಿಸರ ಸಂರಕ್ಷಣೆ ಕಷ್ಟವಾಗಲಿದೆ ಎಂದರು. ಕಾಲೇಜಿನ ಟ್ರಸ್ಟಿಗಳಾದ ಟಿ.ಆರ್ ಸತೀಶ್ ಕುಮಾರ್, ಚಂದ್ರಿಕಾ, ಪ್ರಾಂಶುಪಾಲ ಬಸವರಾಜು, ಉಪನ್ಯಾಸಕರಾದ ಅಭಿಜಿತ್, ಶಿವನಂಜು , ರಜನಿ, ನವೀನ್, ಅರ್ಪಿತಾ ಮತ್ತು ವಿದ್ಯಾರ್ಥಿಗಳು ಇದ್ದರು.