

ಬೆಟ್ಟದಪುರ: ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಉನ್ನತಿಹೊಂದಬೇಕು ಎಂದು ಚಪ್ಪರದಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶಿವಾನಂದ ಹೇಳಿದರು. ಚಪ್ಪರದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಹಲವು ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಸೋಮವಾರ ಅಭಿನಂದಿಸಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮಬೇಕು. ಅದಕ್ಕೆ ವಿವಿಧ ಸ್ಪರ್ಧೆಗಳು ಪೂರಕವಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಸಂದರ್ಭದಲ್ಲೇ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಮುಂದಾಗಬೇಕು ಎಂದರು. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವ ಜಾಗೃತವಾಗಬೇಕು. ಇದರಿಂದ ಭವಿಷ್ಯ ದಿನಗಳಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದರು.ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಸಿ.ಪಿ ಗಿರೀಶ್ ಮಂಜೇಗೌಡ, ಶಿಕ್ಷಕರಾದ ಎಸ್. ಮಹೇಶ, ಸುಮಿತ್ರಾ, ಮೈನಾ, ಚಂದನಾ ಇತರರು ಇದ್ದರು.