

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ತೀವ್ರಗೊಳ್ಳುತ್ತಿದ್ದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿಎಂ ಬಿ.ಎಸ್. ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನೌಕರರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆ, ಮುಷ್ಕರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಲು, ಬಸ್ಗಳಿಗೆ ಕಲ್ಲು ತೂರಾಟ ನಡೆಸಿ ನಷ್ಟ ಉಂಟು ಮಾಡಲು ಕೋಡಿಹಳ್ಳಿ ಚಂದ್ರಶೇಖರ್ರೇ ಕಾರಣ. ಅಲ್ಲದೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತಾಡಿರುವುದು ಖಂಡನೀಯ ಎಂದು ಸಿಎಂ ಕಿಡಿಕಾರಿದ್ದಾರೆ.
ಎಚ್ಡಿಕೆ ವಿರುದ್ಧ ನನ್ನ ಆಕ್ಷೇಪಣೆ ಇದೆ. ಜೆಡಿಎಸ್ ರೈತರ ಪಕ್ಷ, ಅವರ ಚಿಹ್ನೆ ರೈತ ಮಹಿಳೆ. ನಾನು ಅವರ ವಿರುದ್ಧ ಮಾತನಾಡಿರೋದು ನಿಜ. ಅದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಆರೋಪ- ಪ್ರತ್ಯಾರೋಪ ಆಗಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಏಕೆ ಮಾತನಾಡಿದ್ದಾರೆ. ಕುಮಾರಸ್ವಾಮಿ ಸರ್ಕಾರದ ಒಂದು ಭಾಗವೇ? ಎಂದು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.
ಇನ್ನು ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರು ಮಾತನಾಡಿ, ನಮ್ಮ ಒಕ್ಕೂಟದ ಗೌರವ ಅಧ್ಯಕ್ಷರನ್ನಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನೇಮಕ ಮಾಡಿದ್ದೀವಿ. ನಮ್ಮ ಹೋರಾಟದ ಮುಂದಾಳತ್ವ ವಹಿಸುತ್ತಿರೋದು ಅವರೇ. ಮತುಕತೆಗೆ ಕರೆಯುವುದಾದರೆ ಸರ್ಕಾರ ಅವರನ್ನೇ ಕರೆಯಲಿ ಎಂದಿದ್ದಾರೆ.