

ದಾವಣೆಗೆರೆ: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಜುಲೈ 4ರೊಳಗೆ ಈಡೇರಿಸಬೇಕು ಇಲ್ಲವಾದಲ್ಲಿ ಜುಲೈ 5ರಿಂದ ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಚ್ಚರಿಸಿದ್ಧಾರೆ.
ದಾವಣಗೆರೆಯಲ್ಲಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಬಿಎಸ್ವೈ ಚುನಾವಣೆಗೂ ಮುನ್ನ ಐದು ಗ್ಯಾರಂಟಿಗಳನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಹಿ ಮಾಡಿದ ಕಾರ್ಡ್ಗಳನ್ನು ಮನೆ ಮನೆಗೆ ವಿತರಿಸಿದ್ದರು. ಇದನ್ನು ನಂಬಿ ಜನ ನಿಮಗೆ ಮತ ಹಾಕಿದ್ದಾರೆ. ನಿರೀಕ್ಷೆ ಮಾಡದಷ್ಟು ಮಟ್ಟಿಗೆ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಹಲವು ಷರತ್ತುಗಳನ್ನು ವಿಧಿಸಿ ಶಕ್ತಿ ಯೋಜನೆ ಜಾರಿಗೆ ತಂದು ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದೀರಾ. ಅದು ಬಿಟ್ಟರೆ ಒಂದೂವರೆ ತಿಂಗಳಿನಿಂದ ಉಳಿದ ಗ್ಯಾರಂಟಿಗಳನ್ನು ಜಾರಿ ಮಾಡಿಲ್ಲ. ಜುಲೈ 3ರಂದು ಬಜೆಟ್ ಪೂರ್ವಭಾವಿ ಅಧಿವೇಶನ ನಡೆಯಲಿದ್ದು, ಅಷ್ಟರಲ್ಲಿ ಉಳಿದ ಗ್ಯಾರಂಟಿಗಳನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಜುಲೈ 5ರಿಂದ ಗಾಂಧಿ ಪ್ರತಿಮೆ ಎದುರು ಉಪವಾಸ ಹೋರಾಟ ಮಾಡುತ್ತೇನೆ.
ಇದನ್ನೂ ಓದಿ: ಜೂನ್ 23ರಿಂದ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್
ಚುನಾವಣೆಯಲ್ಲಿ ಹಿನ್ನಡೆ ಕಂಡ ಅಭ್ಯರ್ಥಿಗಳು ನನ್ನ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ಧಾರೆ. ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ನಮ್ಮ ಪಕ್ಷದ ಶಾಸಕರು ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್ನವರ ಕಿವಿ ಹಿಂಡಲಿದ್ಧಾರೆ. ಭರವಸೆ ಈಡೇರಿಸುವವರೆಗೂ ಧರಣಿಯನ್ನು ಕೈ ಬಿಡುವ ಮಾತಿಲ್ಲ ಎಂದು ಹೇಳಿದ್ಧಾರೆ.
ಜನರನ್ನು ಮರಳು ಮಾಡಲು ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ನಾಟಕವಾಡುತ್ತಿದೆ. ಚುನಾವಣೆಯಲ್ಲಿ ಗೆಲ್ಲಲೆಂದು ಭರವಸೆ ನೀಡಿದ್ಧಾರೆಯೇ ಹೊರತು ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಒಂದು ಮಾತು ಕೇಳಿಲ್ಲ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದ್ದು, ಕಾಂಗ್ರೆಸ್ನವರು ಹೇಳಿದಂತೆ 10 ಕೆಜಿ ಸೇರಿಸಿ ಜನತೆಗೆ ಒಟ್ಟು 15 ಕೆಜಿ ಅಕ್ಕಿ ಕೊಡಲಿ. ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ಧಾರೆ.