ನೊಂದವರಿಗೆ ಸಿಎಂ ಸಾಂತ್ವನ: ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಲಕ್ಷ ರೂ. ಪರಿಹಾರ

BSY
Published on

ಬೆಂಗಳೂರು: ಕರೊನಾಗೆ ಬಲಿಯಾಗುವ ವಾರಿಯರ್​ಗಳ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಘೋಷಿಸಿ ವಿತರಿಸುತ್ತಿರುವ ಯಡಿಯೂರಪ್ಪ ಸರ್ಕಾರ ಕೋವಿಡ್​ನಿಂದ ಮೃತರಾಗುವ ಜನಸಾಮಾನ್ಯರಿಗೂ 1 ಲಕ್ಷ ರೂ. ಪರಿಹಾರ ನೀಡುವ ಮಹತ್ವದ ಯೋಜನೆ ಪ್ರಕಟಿಸಿದೆ. ದೇಶದಲ್ಲೇ ಇಂಥದ್ದೊಂದು ಯೋಜನೆ ಪ್ರಕಟಿಸಿದ ಮೊದಲ ರಾಜ್ಯ ಕರ್ನಾಟಕ ಎಂಬುದು ವಿಶೇಷ. ರಾಜ್ಯದ 20 ಸಾವಿರ ಬಿಪಿಎಲ್​ ಕಾರ್ಡುದಾರರ ಕುಟುಂಬಗಳಿಗೆ ಸೀಮಿತವಾಗಿ ಈ ಯೋಜನೆ ಅನ್ವಯವಾಗಲಿದೆ. ಸೋಮವಾರ ಆಥಿರ್ಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಬಳಿಕ ಯೋಜನೆಯನ್ನು ಪ್ರಕಟಿಸಿದರು.

ಕರೊನಾದಿಂದಾಗಿ ದುಡಿಯುವ ವ್ಯಕ್ತಿಗಳು ಮೃತಪಟ್ಟು ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲ ಕುಟುಂಬಗಳು ಬೀದಿಪಾಲಾಗಿವೆ. ಇದನ್ನು ಮನಗಂಡು ಬಿಪಿಎಲ್​ ಕುಟುಂಬದಲ್ಲಿ ವಯಸ್ಕರು ಅಥವಾ ದುಡಿಯುವ ವ್ಯಕ್ತಿ ಕರೊನಾದಿಂದ ಮೃತಪಟ್ಟಲ್ಲಿ ಅಂತಹ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲು ತೀಮಾರ್ನಿಸಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಸೋಂಕಿನಿಂದ ಸಾವನ್ನಪ್ಪಿದರೂ, "ಒಂದು ಕುಟುಂಬಕ್ಕೆ ಒಂದು ಪರಿಹಾರ' ಎಂಬ ಸೂತ್ರದಡಿ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ 32,913 ಮಂದಿ ಕರೊನಾದಿಂದ ಮೃತಪಟ್ಟಿದ್ದಾರೆ. ಈ ಪೈಕಿ ಬಿಪಿಎಲ್​ ಕಾರ್ಡ್​ ಹೊಂದಿರುವ ಕುಟುಂಬದಲ್ಲಿ ಒಬ್ಬರ ಸಾವಿಗೆ ಪರಿಹಾರ ನೀಡಲಾಗುತ್ತದೆ. ಈ ಪರಿಹಾರ ವಿತರಿಸಲು ರಾಜ್ಯ ಸರ್ಕಾರ 250ರಿಂದ 300 ಕೋಟಿ ರೂ. ಮೀಸಲಿಟ್ಟಿದೆ. 20 ಸಾವಿರಕ್ಕಿಂತ ಹೆಚ್ಚಿನ ಕುಟುಂಬಕ್ಕೆ ನೆರವಾಗಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ರಾಜ್ಯ ಸರ್ಕಾರದ ಈ ಪರಿಹಾರ ಯೋಜನೆ ಕರೊನಾ ಎರಡೂ ಅಲೆಗಳಲ್ಲಿ ಮೃತಪಟ್ಟವರಿಗೆ ಅನ್ವಯಿಸಲಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಒಂದು ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಕೋವಿಡ್​ನಿಂದ ಮೃತಪಟ್ಟ ಎಲ್ಲರಿಗೂ ಪರಿಹಾರ ಇಲ್ಲ. ವಯಸ್ಸಾದವರು, ಚಿಕ್ಕಮಕ್ಕಳು ಮೃತರಾಗಿದ್ದರೆ ಈ ಯೋಜನೆ ಯಡಿ ಪರಿಹಾರ ಸಿಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.

ಮಕ್ಕಳ ಖಾತೆಗೆ ಜಮೆ: ಅಪ್ಪ-&ಅಮ್ಮ ಇಬ್ಬರೂ ತೀರಿಕೊಂಡಿದ್ದರೆ ಮಕ್ಕಳ ಖಾತೆಗೆ ಹಣ ಜಮಾ ಮಾಡಲಾಗು ವುದು. ಪ್ರಧಾನಿ ಮೋದಿ ಘೋಷಿಸಿರುವಂತೆ 10 ಲಕ್ಷ ರೂ. ಪರಿಹಾರದ ಜತೆ ರಾಜ್ಯದಿಂದ 1 ಲಕ್ಷ ರೂ. ಹೆಚ್ಚುವರಿ ಯಾಗಿ ನೀಡಲಾಗುತ್ತದೆ. ಪರಿಹಾರ ಪಡೆಯುವ ವಿಧಾನ ಕುರಿತು ಮಾರ್ಗಸೂಚಿಯಲ್ಲಿ ತಿಳಿಯಪಡಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net