

ಮಧುಗಿರಿ : ಲೂಟಿ ಹೊಡೆದ ಹಣದಲ್ಲಿ ಶಾಸಕರನ್ನು ಖರೀದಿಸಿ ಸಿಎಂ ಆಗಿರುವ ಯಡಿಯೂರಪ್ಪ ಕೆಟ್ಟು ನಿಂತಿರುವ ಡಕೋಟ ಎಕ್ಸ್‌ಪ್ರೆಸ್ ಬಸ್‌ನ ಸ್ಟೇರಿಂಗ್ ಹಿಡಿದು ಸವಾರಿ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಪಂ ಸದಸ್ಯರ ಅಭಿನಂದನಾ ಸಮಾರಂಭ ಮತ್ತು ಜನಧ್ವನಿ ಯಾತ್ರೆ, ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು,
ಹಿಂಬಾಗಿಲಿನಿಂದ ಅಧಿಕಾರ ಹಿಡಿದ ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ರೈತರ 1 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿ 2 ವರ್ಷ ಕಳೆದರೂ ಮನ್ನಾ ಮಾಡಿಲ್ಲ. ಕರೊನಾ ನೆಪದಲ್ಲಿ ಬಡವರು, ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರ ಯೋಜನೆಗಳಿಗೆ ಕತ್ತರಿ ಹಾಕಿದ್ದಾರೆ ಎಂದರು.
ವೆಂಟಿಲೇಟರ್ ಖರೀದಿಯಲ್ಲಿ ಭರ್ಜರಿ ಅವ್ಯವಹಾರ ನಡೆಸಿದ್ದು, 2.50 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ. ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್, ವಿದ್ಯಾಸಿರಿ ಪಶುಭಾಗ್ಯ, ಯೋಜನೆಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ ನನ್ನ ಅವಧಿಯಲ್ಲಿ ನೀಡುತ್ತಿದ್ದ 7 ಕೆ.ಜಿ ಅಕ್ಕಿಯನ್ನು 5 ಕೆ.ಜಿ.ಗೆ ಇಳಿಸಿದ್ದು, ಮುಂದಿನ ದಿನಗಳಲ್ಲಿ 3 ಕೆಜಿಗೆ ಇಳಿಸಲು ಚಿಂತನೆ ನಡೆದಿದೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಹೋಟೆಲ್‌ನಲ್ಲಿ ತಿಂಡಿಗೆ ದರ ನಿಗದಿ ಮಾಡಿದಂತೆ ಇಂತಹ ಅಧಿಕಾರಿಗೆ ಇಂತಿಷ್ಟು ಹಣ ಎಂದು ವರ್ಗಾವಣೆಗೆ ನಿಗದಿ ಮಾಡಿದ್ದು, ಇವರ ಅಧಿಕಾರ ಅವಧಿಯಲ್ಲಿ ವರ್ಗಾವಣೆ ಬಯಸುವ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ನೀಡಿ ಬರಬೇಕು ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಸ್ವಾತಂತ್ರ್ಯ ಬಂದಾಗಿನಿಂದಲೂ ಇಂತಹ ಪ್ರತಿಭಟನೆಯನ್ನು ದೇಶ ಕಂಡಿಲ್ಲ. ಪ್ರಧಾನಿ ಮೋದಿಗೆ ರೈತರ ಕಷ್ಟ ಕೇಳಲು ಸೌಜನ್ಯವಿಲ್ಲ. ನಾವು ರೈತರ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಕಾಂಗ್ರೆಸ್ ಕಚೇರಿ ದೇವಸ್ಥಾನವಿದ್ದಂತೆ, ಮಧುಗಿರಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ರಾಜಣ್ಣನವರು 20 ಗುಂಟೆ ಜಮೀನು ನೋಡಿದ್ದು, ಇದಕ್ಕೆ ಎಲ್ಲ ಕಾರ್ಯಕರ್ತರೂ ದೇಣಿಗೆ ನೀಡಬೇಕು ಎಂದರು. ಶಾಸಕ ವೆಂಕಟರವಣಪ್ಪ, ಮಾಜಿ ಶಾಸಕ ಶಫೀ ಅಹಮದ್, ಮಾಜಿ ಸಂಸದ ಚಂದ್ರಪ್ಪ, ತಾಪಂ ಅಧ್ಯಕ್ಷೆ ಇಂದಿರಾ, ಜಿಪಂ ಸದಸ್ಯ ಶಾಂತಲಾ, ಜಿ.ಜೆ.ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ, ಬಿ.ನಾಗೇಶ್‌ಬಾಬು, ಎಸ್.ಆರ್.ರಾಜಗೋಪಾಲ ಇದ್ದರು.
ರಾಜಣ್ಣ ಗೆದ್ದರೆ ಉಜ್ವಲ ಭವಿಷ್ಯ: ಕಳೆದ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಅವರನ್ನು ಸೋಲಿಸಿ ನೀವು ಗೆಲ್ಲಿಸಿರುವ ಜೆಡಿಎಸ್ ಶಾಸಕ ಅಭಿವೃದ್ಧಿ ನೆಪದಲ್ಲಿ ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲಾ ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿದ್ದನ್ನೇ ನೋಡಿಲ್ಲ. ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾಗದಂತೆ ಸರಿಪಡಿಸಿಕೊಳ್ಳಿ, ಬಡವರ ಪರ ಕೆಲಸ ಮಾಡುವ ಕೆಲವೇ ರಾಜಕಾರಣಿಗಳಲ್ಲಿ ರಾಜಣ್ಣ ಸಹ ಒಬ್ಬರು. ಅವರನ್ನು ಗೆಲ್ಲಿಸಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆಕೊಟ್ಟರು.
ಅಚ್ಚರಿ ಮೂಡಿಸಿದ ಮಾಜಿ ಸಂಸದ ಎಸ್ಪಿಎಂ ಗೈರು : ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಗೈರು ಹೆಚ್ಚು ಚರ್ಚೆಗೆ ಒಳಗಾಯಿತು. ತುಮಕೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್ಪಿಎಂ ಮಧುಗಿರಿ ಕಾರ್ಯಕ್ರಮದಲ್ಲಿ ಕಾಣಿಸಲಿಲ್ಲ. ಟಿಕೆಟ್ ಕೈತಪ್ಪಿದ ನಂತರ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಮುದ್ದಹನುಮೇಗೌಡ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಮುಂದಿನ ರಾಜಕೀಯ ನಡೆ ಕುತೂಹಲ ಮೂಡಿಸಿದೆ. ರಾಜ್ಯ ರಾಜಕಾರಣಕ್ಕೆ ಆಸಕ್ತಿ ತೋರಿಸುತ್ತಿರುವ ಎಸ್ಪಿಎಂ ಕುಣಿಗಲ್ ಅಥವಾ ತುಮಕೂರು ನಗರ ವಿಧಾನ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ ಎನ್ನಲಾಗಿದ್ದು ಪಕ್ಷಾಂತರದ ಬಗ್ಗೆಯೂ ಊಹಾಪೋಹ ಎದ್ದಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಧುಗಿರಿಗೆ ನಾನು ಕೇಳಿದ ಯೋಜನೆಗಳನ್ನೆಲ್ಲ ನೀಡಿದ್ದಾರೆ. ಹಾಗಾಗಿ, ನನಗೆ ಸಿದ್ದರಾಮಯ್ಯ ಅಚ್ಚು ಮೆಚ್ಚು, ಮುಂದಿನ ದಿನಗಳಲ್ಲಿ ನಾನು ಜನರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾದರೆ ಮಧುಗಿರಿಯನ್ನು ಜಿಲ್ಲೆಯನ್ನಾಗಿ ಮಾಡಲಿದ್ದು, ಇದಕ್ಕೆ ಎಲ್ಲ ನಾಯಕರೂ ಸಹಕಾರ ನೀಡಲಿದ್ದಾರೆ. ಕೆ.ಎನ್.ರಾಜಣ್ಣ, ಮಾಜಿ ಶಾಸಕ