

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವಿಗೆ ಪೂರಕವಾಗಿ ವಿವಿಧ ಹಂತಗಳಲ್ಲಿ ಸಂಘಟನಾತ್ಮಕ ಕೆಲಸಗಳು ನಡೆಯುತ್ತಿವೆ. ಏ.26 ಮತ್ತು 27ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯ ವಿವಿಧೆಡೆ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
ಸೋಮವಾರ ಮಹಾಶಕ್ತಿ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಜವಾಬ್ದಾರಿ ಮಹಾ ಶಕ್ತಿ ಕೇಂದ್ರ, ಮಂಡಲದ ಪ್ರಮುಖರು, ಪ್ರಚಾರಕರು, ಸಹ ಪ್ರಚಾರಕರ ಮೇಲಿದೆ ಎಂದರು.
ಚುನಾವಣೆ ಗೆಲ್ಲಲು ಪಕ್ಷ ಎಲ್ಲ ರೀತಿಯಿಂದ, ಎಲ್ಲ ಹಂತಗಳಲ್ಲೂ ತಯಾರಿ ಮಾಡಿಕೊಳ್ಳುತ್ತಿದೆ. ಗೆಲ್ಲುವಿಗೆ ಅವಶ್ಯವಿರುವ ತಂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸಮಾವೇಶ, ಸಣ್ಣ ಸಭೆಗಳು ಸೇರಿ ಒಟ್ಟು ಎರಡು ಸಾವಿರ ಸಭೆ ನಡೆಸುವ ಗುರಿಯಿದೆ. ಇದುವರೆಗೆ ಸಾವಿರಕ್ಕೂ ಹೆಚ್ಚು ಸಭೆಗಳು ನಡೆದಿವೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾರ್ಗದರ್ಶನ ಮಾಡಿದರು. ಜಿಲ್ಲಾ ಚುನಾವಣಾ ಪ್ರಭಾರಿ ರಘುಪತಿ ಭಟ್, ಸಂಚಾಲಕ ಆರ್.ಕೆ.ಸಿದ್ದರಾಮಣ್ಣ, ಕ್ಲಸ್ಟರ್ ಸಂಯೋಜಕ ಎಂ.ಬಿ.ಭಾನುಪ್ರಕಾಶ್ ಉಪಸ್ಥಿತರಿದ್ದರು.