ಶನಿವಾರ ರಜೆ ಬದಲು ಸಿಎಲ್- ಸಂಪುಟ ಸಭೆ ನಿರ್ಧಾರ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 220 ಕೋಟಿ ರೂಪಾಯಿ

Vidhana Soudha vvani
Published on

ಬೆಂಗಳೂರು: 4ನೇ ಶನಿವಾರದ ರಜೆ ಅನ್ವಯ ಆಗದೆ ಇರುವ ಸರ್ಕಾರಿ ನೌಕರರಿಗೆ 15 ಸಿಎಲ್ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಭೆಯ ನಂತರ ಸುದ್ದಿಗಾರರಿಗೆ ವಿವರ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ನಾಲ್ಕನೇ ಶನಿವಾರ ಸರ್ಕಾರಿ ರಜೆ ಘೋಷಿಸಿದ್ದ ಹಿನ್ನೆಲೆಯಲ್ಲಿ ಸಿಎಲ್​ಗಳ ಸಂಖ್ಯೆಯನ್ನು 10ಕ್ಕೆ ಇಳಿಸಲಾಗಿತ್ತು. ರಜೆ ಅನ್ವಯವಾಗದ ಇಲಾಖೆಗಳಲ್ಲಿ ಸಿಎಲ್ ಹೆಚ್ಚಳಕ್ಕೆ ಬೇಡಿಕೆ ಇತ್ತು ಎಂದರು. ಕಾರ್ವಿುಕ ಇಲಾಖೆ ಕಾರ್ವಿುಕ ಸೇವೆಗಳ (ವೃಂದ ಮತ್ತು ನೇಮಕಾತಿ)ನಿಯಮಗಳು-2019ಕ್ಕೆ ಅನುಮೋದನೆ ನೀಡಲಾಗಿದೆ. ವಸತಿ ರಹಿತರಿಗೆ ವಸತಿ ಕಲ್ಪಿಸಲು ಚಿಕ್ಕಬಳ್ಳಾಪುರ ಜಿಲ್ಲೆ ಕಸಬಾ ಹೋಬಳಿ ಮರಳುಕುಂಟೆಯಲ್ಲಿ 61 ಎಕರೆ, ಆವುಲಹಳ್ಳಿಯಲ್ಲಿ 10 ಎಕರೆ ಸೇರಿ 71 ಎಕರೆಗೆ ಭೂ ಕಂದಾಯ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗಕ್ಕೆ 220 ಕೋಟಿ: ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 220 ಕೋಟಿ ರೂ. ಅನುದಾನ ಮಂಜೂರಿಗೆ ಸಂಪುಟ ಒಪ್ಪಿಗೆ ನೀಡಿದೆ. ವಿಮಾನ ನಿಲ್ದಾಣ ಕಾಮಗಾರಿ ಬಗ್ಗೆ ಮೇ.ರೈಟ್ಸ್ ಸಂಸ್ಥೆ ಸಲ್ಲಿಸಿರುವ ಕಾನ್ಸೆಪ್ಟ್ ನೋಟ್ಸ್ ಹಿನ್ನಲೆಯಲ್ಲಿ ಅನುಮೋದನೆ ನೀಡಲಾಗಿದೆ.

ಉಚಿತ ಅಕ್ಕಿ ಮತ್ತು ಗೋಧಿ: ಸಿದ್ಧಗಂಗಾ ಮಠ ಸೇರಿ 350 ಕಲ್ಯಾಣ ಸಂಸ್ಥೆಗಳಿಗೆ ದಾಸೋಹ ಯೋಜನೆಯಲ್ಲಿ 1 ವರ್ಷ ಕಾಲ ಉಚಿತವಾಗಿ ಅಕ್ಕಿ ಮತ್ತು ಗೋಧಿಯನ್ನು ನೀಡಲು ಮಂಗಳವಾರ ಮುಖ್ಯಮಂತ್ರಿಗಳ ಸಚಿವ ಸಂಪುಟ ಒಪ್ಪಿದೆ. ಈ ತೀರ್ವನದಿಂದ 32,700 ಮಕ್ಕಳಿಗೆ ಅನುಕೂಲ ವಾಗಲಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಪ್ರಮುಖ ತೀರ್ಮಾನಗಳು

  • ಚುನಾವಣಾ ಆಯೋಗ ಮನವಿ ನಿರ್ವಾಚನ ನಿಲಯ ಕಚೇರಿ ಪಕ್ಕದಲ್ಲಿ ಹೆಚ್ಚುವರಿ ಕಚೇರಿ ನಿರ್ವಣಕ್ಕೆ 13.50 ಕೋಟಿ ರೂ. ಮಂಜೂರು.
  • ಶಿಕ್ಷಣ ಇಲಾಖೆಯ ನಲಿ-ಕಲಿ ಯೋಜನೆಗೆ ಕಲಿಕಾ ಸಾಮಾಗ್ರಿಗಳನ್ನು ಖರೀದಿ ಮಾಡಲು 27 ಕೋಟಿ ರೂ. ಅನುದಾನ.
  • ವಿವಿಧ ಜಿಲ್ಲೆಗಳಲ್ಲಿ ತುರ್ತು ಆರೋಗ್ಯ ಸೇವೆ ಗಾಗಿ 32.04 ಕೋಟಿ ರೂ. ವೆಚ್ಚದಲ್ಲಿ 120 ಹೊಸ ಆಂಬುಲೆನ್ಸ್ ಖರೀದಿಗೆ ಒಪ್ಪಿಗೆ.
  • ಬೆಂಗಳೂರು ಬೋರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ಮತ್ತು ಎಚ್​ಎಸ್​ಐಎಸ್ ಘೋಷ್ ಆಸ್ಪತ್ರೆ ಆವರಣದಲ್ಲಿ ಬಾಲಕಿಯರ ಹಾಸ್ಟೆಲ್ ಕಟ್ಟಡ ನಿರ್ವಣಕ್ಕೆ 263.10 ಕೋಟಿ ರೂ. ಮೀಸಲು.
  • ಬೆಂಗಳೂರಿನ ಕೇಂದ್ರ ಕಾರಾಗೃಹ 2ನೇ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ 1056 ಕೋಟಿ ರೂ., ಬೀದರ್​ನಲ್ಲಿ ವಿಶಿಷ್ಟ ರೀತಿಯ ಜೈಲು ನಿರ್ಮಾಣ ಕಾಮಗಾರಿಗೆ 99.95 ಕೋಟಿ ರೂ. ನಿಗದಿ.
  • ಕೊಪ್ಪಳ ಜಿಲ್ಲೆ ಹೀರೇಹಳ್ಳಕ್ಕೆ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ಸಲು ವಾಗಿ ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಕಾಮಗಾರಿಗೆ 89.86 ಕೋಟಿ
  • ಮೈಸೂರು ಜಿಲ್ಲಾ ಕಚೇರಿ ಸಂಕೀರ್ಣಗಳ ಕಟ್ಟಡ ಕಾಮಗಾರಿ ಮೊತ್ತ 84.69 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
     
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net