

ಶಿವಮೊಗ್ಗ: ಮುಂದಿನ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಆ. 21ರ ನಂತರ ಬಿಜೆಪಿಯ ಎಲ್ಲ ನಾಯಕರೂ ಸಾಮೂಹಿಕವಾಗಿ ಪ್ರವಾಸ ಮಾಡುತ್ತೇವೆ. ನಾನು ಬೆಂಗಳೂರಿಗೆ ತೆರಳಿದ ಮೇಲೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ. ಬಿಬಿಎಂಪಿ ಚುನಾವಣೆಯಲ್ಲಿ ನೂರಕ್ಕೆ ನೂರು ನಾವು ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಸಹಜವಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸರ್ಕಾರ ಕೆಲಸ ಮಾಡಿದೆ. ದೀನದಲಿತರ, ಬಡವರ ಪರವಾಗಿ ಬಸವರಾಜ ಬೊಮ್ಮಾಯಿ ಸರ್ಕಾರ ಕೆಲಸ ಮಾಡಿದೆ. ಹೀಗಾಗಿ ಇದನ್ನು ಜನರಿಗೆ ತಿಳಿಸಲು ಆ.15ರಂದು ಬೆಂಗಳೂರಿನಲ್ಲಿ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ವಿನಾ ಕಾರಣ ಗೊಂದಲ ಸೃಷ್ಠಿಸಿ, ಅಪಪ್ರಚಾರ ಮಾಡುತ್ತಿದೆ. ಇದರಿಂದ ಅವರಿಗೆ ಯಾವುದೇ ಲಾಭವಾಗುವುದಿಲ್ಲ. ಬದಲಾಗಿ ಜನರು ಇವರ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಸಿಎಂ ಆಗುವ ತಿರುಕನ ಕನಸು ಕೆಲವರು ಕಾಣುತ್ತಿದ್ದಾರೆ. ಅದು ನನಸಾಗುವುದಿಲ್ಲ ಎಂದರು.