

ಆರ್.ತುಳಸಿಕುಮಾರ್
ಬೆಂಗಳೂರು: ಮಹಾನಗರದಲ್ಲಿ ಭಾರಿ ಸಮಸ್ಯೆಗೆ ಕಾರಣವಾಗಿರುವ ಪ್ರಾಣಿಮಾಂಸ ತ್ಯಾಜ್ಯದ ಬೇಕಾಬಿಟ್ಟಿ ವಿಲೇವಾರಿಗೆ ಕಡಿವಾಣ ಹಾಕಿ, ವೈಜ್ಞಾನಿಕವಾಗಿ ಸಂಗ್ರಹಿಸಿ ಸಂಸ್ಕರಣೆ ಕೇಂದ್ರಗಳಿಗೆ ರವಾನಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮ (ಬಿಎಸ್‌ಡಬ್ಲುೃಎಂಎಲ್) ಪ್ರತ್ಯೇಕ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.
ಸ್ವಚ್ಛ ಬೆಂಗಳೂರು ಅಭಿಯಾನದ ಭಾಗವಾಗಿ ಘನತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುವ ಪ್ರಯತ್ನ ಸಾಗಿದೆ. ಇದೇ ರೀತಿ ಪ್ರಾಣಿಮಾಂಸ ತ್ಯಾಜ್ಯವನ್ನೂ ಪರಿಸರಕ್ಕೆ ಹಾನಿ ಆಗದ ರೀತಿಯಲ್ಲಿ ವಿಲೇ ಮಾಡಲು ಸರ್ಕಾರ ಸೂಚಿಸಿದೆ. ಇದನ್ನಾಧರಿಸಿ ಬಿಎಸ್‌ಡಬ್ಲ್ಯುಎಂಎಲ್ ಹೊಸ ಯೋಜನೆ ರೂಪಿಸಿ ಟೆಂಡರ್ ಆಹ್ವಾನಿಸಿದೆ. ಜಿಬಿಎ ವ್ಯಾಪ್ತಿಯ ಐದೂ ಪಾಲಿಕೆಗಳಿಗೆ ಪ್ರತ್ಯೇಕ ಟೆಂಡರ್ (ಒಟ್ಟು 36.50 ಕೋಟಿ ರೂ.) ಕರೆದು ಗುತ್ತಿಗೆದಾರರಿಗೆ ವಹಿಸಲಾಗುತ್ತದೆ.
ಪ್ರಸ್ತುತ ಮಹಾನಗರದಲ್ಲಿ ಸುಮಾರು 5 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಪ್ರಾಣಿಮಾಂಸ ಮಾರಾಟ ಮಳಿಗೆಗಳಿವೆ. ಇವುಗಳಲ್ಲಿ ಕುರಿ, ಕೋಳಿ, ಹಂದಿ, ಮೀನು ಹಾಗೂ ಬೀಫ್ ಮಳಿಗೆಗಳು ಸೇರಿದ್ದು, ಅರ್ಧದಷ್ಟು ಚಿಕನ್ ಸ್ಟಾಲ್‌ಗಳು ಕಾರ್ಯಾಚರಿಸುತ್ತಿವೆ. ಆದರೆ, ಹಲವು ಮಳಿಗೆಗಳು ಪಾಲಿಕೆಯಿಂದ ಪರವಾನಗಿ ಪಡೆಯದೆ ನಡೆಯುತ್ತಿವೆ ಎಂಬ ದೂರು ಕೇಳಿಬಂದಿದೆ. ಕಾರ್ಪೋರೇಷನ್ ಬಳಿಯೂ ಇಂತಹ ಮಳಿಗೆಗಳ ನಿಖರ ಸಂಖ್ಯೆ ಇಲ್ಲ. ಹಾಗಾಗಿ ಪ್ರಾಣಿಮಾಂಸದ ತ್ಯಾಜ್ಯ ವಿಲೇವಾರಿ ಹಳಿತಪ್ಪಿದೆ. ಹಲವು ಮಳಿಗೆದಾರರು ಮಾಂಸದ ತ್ಯಾಜ್ಯವನ್ನು ರಸ್ತೆಬದಿ, ಚರಂಡಿ, ರಾಜಕಾಲುವೆಗೆ ಬಿಸಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಮಧ್ಯರಾತ್ರಿ ವೇಳೆ ಮೋರಿಗೆ ಸುರಿಯುವ ಕಾರಣ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ರೋಗ-ರುಜೀನಕ್ಕೂ ಆಸ್ಪದ ನೀಡಲಾಗಿದೆ.
ಬೀದಿನಾಯಿ ಹಾವಳಿ ಹೆಚ್ಚಳಕ್ಕೆ ಕಾರಣ?:
ನಗರದಲ್ಲಿ ಬೀದಿನಾಯಿ ಸಮಸ್ಯೆ ವಿಪರೀತವಾಗಿದೆ. ಇದರಿಂದ ಶ್ವಾನಕಡಿತ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿನಿತ್ಯವೂ ಹಲವು ಪ್ರದೇಶಗಳಲ್ಲಿ ಬೀದಿನಾಯಿ ಹಾವಳಿ ಬಗ್ಗೆ ಪಾಲಿಕೆಗೆ ದೂರುಗಳು ಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ಘಟನೆ ನಡೆದ ಸ್ಥಳಕ್ಕೆ ತೆರಳಿ ನಾಯಿ ಹಿಡಿಯುವ ಕೆಲಸ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮುಖ್ಯವಾಗಿ ಬೀದಿನಾಯಿಗಳು ಮಾಂಸದ ಮಳಿಗೆಗಳ ಬಳಿ ಹಾಗೂ ಇಂತಹ ಸ್ಟಾಲ್‌ನವರು ಬಿಸಾಡುವ ಪ್ರಾಣಿತ್ಯಾಜ್ಯವನ್ನು ಭಕ್ಷಿಸಿ ವ್ಯಗ್ರವಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ. ಒಮ್ಮೆ ನಾನ್‌ವೆಜ್ ರುಚಿ ನೋಡಿದ ಬಳಿಕ ಶ್ವಾನಗಳು ಅಂತಹದ್ದೇ ಆಹಾರ ಅರಸಿ ಆಯಾ ಪ್ರದೇಶಗಳಲ್ಲಿ ಸಂಚರಿಸುವ ವೇಳೆ ಮನುಷ್ಯರ ಮೇಲೆ ಎರಗುತ್ತವೆ. ಮುಖ್ಯವಾಗಿ ಒಂಟಿಯಾಗಿ ಓಡಾಡುವ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಬೀದಿನಾಯಿ ದಾಳಿಗೆ ತುತ್ತಾಗುತ್ತಿರುವುದು ಪಾಲಿಕೆಗೂ ಸಮಸ್ಯೆ ತಂದೊಡ್ಡಿದೆ.
ನ್ಯಾಯಾಲಯ ಕೂಡ ಬೀದಿನಾಯಿ ಹಾವಳಿಗೆ ಕಡಿವಾಣ ಹಾಕಲು ಪಾಲಿಕೆಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬಿಎಸ್‌ಡಬ್ಲ್ಯುಎಂಎಲ್ ಉಪಕ್ರಮ ಒಂದಿಷ್ಟು ಪರಿಹಾರ ನೀಡುವ ಸಾಧ್ಯತೆ ಇದೆ. ಟೆಂಡರ್ ಅಂತಿಮಗೊಂಡು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ ಬಳಿಕ ಮಾಂಸದಂಗಡಿಗಳು ಎಲ್ಲೆಂದರಲ್ಲಿ ಮೀಟ್ ವೇಸ್ಟ್ ಬಿಸಾಡದೆ ಅವುಗಳನ್ನು ಪ್ರಾಣಿತ್ಯಾಜ್ಯ ಸಂಗ್ರಾಹಕರಿಗೆ ನೀಡಬೇಕಾಗುತ್ತದೆ. ಇದಕ್ಕಾಗಿ ನಿಗಮವು ಶೀಘ್ರದಲ್ಲೇ ಜಾಗೃತಿ ಕೈಗೊಳ್ಳಲಿದೆ.
ಪಾಲಿಕೆವಾರು ಟೆಂಡರ್ ಮೊತ್ತದ ವಿವರ:
ಪಾಲಿಕೆ ಮೊತ್ತ (ಕೋಟಿ ರೂ.ಗಳಲ್ಲಿ)
ಉತ್ತರ 7.30
ದಕ್ಷಿಣ 5.47
ಪೂರ್ವ 5.47
ಪಶ್ಚಿಮ 7.30
ಕೇಂದ್ರ 10.95
ಮೀಟ್ ವೇಸ್ಟ್ ಬಿಸಾಡುವವರ ವಿರುದ್ಧ ದಂಡಾಸ್ತ್ರ:
ಜಿಬಿಎ ವ್ಯಾಪ್ತಿಯಲ್ಲಿ ಪ್ರಾಣಿ ಮಾಂಸ ಮಾರಾಟ ಮಾಡುವವವರು ಪರವಾನಗಿ ಪಡೆದೇ ವ್ಯಾಪಾರ ಮಾಡಬೇಕಿದೆ. ಜತೆಗೆ ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. ತಪ್ಪಿದ್ದಲ್ಲಿ ಮಳಿಗೆಯೊಂದಕ್ಕೆ 25 ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಪುನರಾವರ್ತಿತ ಕೃತ್ಯಕ್ಕೆ ಪರವಾನಗಿ ರದ್ದುಗೊಳಿಸುವ ಅಂಶ ಪಾಲಿಕೆ ಕಾಯ್ದೆಯಲ್ಲಿ ಅಡಕ ಮಾಡಲಾಗಿದೆ. ಟೆಂಡರ್ ಅಂತಿಗೊಂಡು ಜಾರಿಗೆ ಬರುವ ದಿನದಿಂದ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಬಿಎಸ್‌ಡಬ್ಲ್ಯುಎಂಎಲ್ ನಿರ್ಧರಿಸಿದೆ.
ಪ್ರತಿ ಕೆ.ಜಿ. ತ್ಯಾಜ್ಯಕ್ಕೆ 5 ರೂ. ಶುಲ್ಕ:
ಮಳಿಗೆಗಳು ಹೊರಹಾಕುವ ಮಾಂಸ ತ್ಯಾಜ್ಯವನ್ನು ಮೀಟ್‌ಸ್ಟಾಲ್ ಬಳಿಯೇ ಸಂಗ್ರಹಿಸಲಾಗುತ್ತದೆ. ಇದಕ್ಕಾಗಿ ಮಳಿಗೆದಾರರು ಪ್ರತಿ ಕೆ.ಜಿ.ಗೆ 5 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕವನ್ನು ಆಯಾ ದಿನ ಅಥವಾ ತಿಂಗಳಿಗೊಮ್ಮೆ ಸಂಗ್ರಹಿಸುವುದನ್ನು ಶೀಘ್ರವೇ ಅಂತಿಮಗೊಳಿಸಲಾಗುತ್ತದೆ.
ನಗರದಲ್ಲಿ ಪ್ರಾಣಿಮಾಂಸ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಪಾಲಿಕೆ ಕಣ್ತಪ್ಪಿಸಿ ಕೆಲವರು ರಸ್ತೆಬದಿ, ರಾಜಕಾಲುವೆಗೆ ಬೀಸಾಡುವ ಪ್ರಕರಣಗಳು ನಡೆಯುತ್ತಿವೆ. ಪರಿಸರಕ್ಕೆ ಹಾನಿಯಾಗುವ ಇಂತಹ ಪ್ರವೃತ್ತಿಗೆ ತಡೆ ಹಾಕಲು ಮಳಿಗೆಗಳಿಂದಲೇ ತ್ಯಾಜ್ಯ ಸಂಗ್ರಹಿಸಿ ಸಾಗಣೆ ಮಾಡಲು ಟೆಂಡರ್ ಕರೆಯಲಾಗಿದೆ. ಕೆ.ಜಿ. ತ್ಯಾಜ್ಯಕ್ಕೆ 5 ರೂ. ಶುಲ್ಕ ವಿಧಿಸಲಿದ್ದು, ಶೀಘ್ರವೇ ವಿವರವಾದ ಮಾಹಿತಿ ಪ್ರಕಟಿಸಲಾಗುವುದು.
- ಕರಿಗೌಡ, ಸಿಇಒ, ಬಿಎಸ್‌ಡಬ್ಲುೃಎಂಎಲ್
ಮುಖ್ಯಾಂಶ:
* ಜಿಬಿಎ ವ್ಯಾಪ್ತಿಯಲ್ಲಿವೆ 5 ಸಾವಿರಕ್ಕೂ ಹೆಚ್ಚು ಮೀಟ್‌ಸ್ಟಾಲ್
* 2 ಸಾವಿರಕ್ಕೂ ಅಧಿಕ ಕಿಚನ್ ಸ್ಟಾಲ್ ಕಾರ್ಯಾಚರಣೆ
* ನಿತ್ಯ 200-250 ಟನ್ ಮಾಂಸ ತ್ಯಾಜ್ಯ ಉತ್ಪತ್ತಿ (ವಾರಾಂತ್ಯ ಶೇ.20 ಹೆಚ್ಚಳ)
* ಪ್ರತಿ ಮಳಿಗೆ ಬಳಿಯೇ ನಿತ್ಯವೂ ಮಾಂಸ ತ್ಯಾಜ್ಯ ಸಂಗ್ರಹಕ್ಕೆ ಹೊಸ ವ್ಯವಸ್ಥೆ
* ವೈಜ್ಞಾನಿಕ ವಿಲೇಗೆ ಸಹಕರಿಸದ ಮೀಟ್ ಸ್ಟಾಲ್ ಪರವಾನಗಿ ರದ್ದು ಎಚ್ಚರಿಕೆ
* ಮಾಂಸ ತ್ಯಾಜ್ಯ ಸಂಸ್ಕರಿಸಿ ಮೀನು ಇತ್ಯಾದಿ ಪ್ರಾಣಿಗಳಿಗೆ ಪ್ರೋಟೀನ್ ಆಹಾರವಾಗಿ ಉತ್ಪಾದನೆ.