

ಬೆಂಗಳೂರು: ಮಹಾನಗರದಲ್ಲಿ ಉತ್ಪತ್ತಿಯಾಗುವ ಹಸಿ/ಒಣ ತ್ಯಾಜ್ಯ, ರಸ್ತೆ ಗುಡಿಸುವಿಕೆ ತ್ಯಾಜ್ಯದ ಸಂಗ್ರಹಣೆ ಹಾಗೂ ಸಾಗಣೆ ಸೇವೆ ಒದಗಿಸುವ ಟೆಂಡರ್ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ಅರ್ಹ ಗುತ್ತಿಗೆದಾರರಿಂದ ಬಿಡ್ ಆಹ್ವಾನಿಸಿದೆ.
ಪಾಲಿಕೆ ವ್ಯಾಪ್ತಿಯ ವಿದಾನಸಭಾ ಕ್ಷೇತ್ರವಾರು ಟೆಂಡರ್ ಆಹ್ವಾನಿಸಲು 33 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ದೊಡ್ಡ ಕ್ಷೇತ್ರಗಳಲ್ಲಿ ಎರಡರಂತೆ, ಸಣ್ಣ ಕ್ಷೇತ್ರಗಳಿಗೆ ಒಂದರಂತೆ ಟೆಂಡರ್ ಕರೆಯಾಗಿದೆ. ಮುಂದಿನ ಏಳು ವರ್ಷದ ಅವಧಿಗೆ ಒಟ್ಟು 33 ಪ್ಯಾಕೇಜ್‌ಗಳಿಗೆ 4,791 ಕೋಟಿ ರೂ. ಮೊತ್ತ ನಿಗದಿ ಪಡಿಸಲಾಗಿದೆ. ಕೆಪಿಪಿ ಪೋರ್ಟಲ್‌ನಲ್ಲಿ ಪೂರ್ವ ಬಿಡ್ ಪ್ರಶ್ನೆಗಳನ್ನು ಅಪ್‌ಲೊಡ್ ಮಾಡಲು ಮಾಡಲು ಜೂ.8ರವರೆಗೆ ಕಾಲಾವಕಾಶ ನೀಡಲಾಗಿದೆ. ಟೆಂಡರ್ ಪೂರ್ವ ಬಿಡ್ ಸಭೆ ಜೂ.9ರಂದು ನಿಗದಿಯಾಗಿದೆ. ಟೆಂಡರ್ ಸ್ವೀಕರಿಸಲು ಜೂ.27ರಂದು ಗಡುವು ನೀಡಿದ್ದು, ತಾಂತ್ರಿಕ ಬಿಡ್ ಅನ್ನು ಜೂ.30ರಂದು ತೆರೆಯಲಾಗುವುದು ಎಂದು ಬಿಎಸ್‌ಡಬ್ಲ್ಯುಎಂಎಲ್ ಟೆಂಡರ್ ಷರತ್ತಿನಲ್ಲಿ ನಮೂದಿಸಿದೆ.
ಕಳೆದ ವಾರವಷ್ಟೇ ಸಚಿವ ಸಂಪುಟದಲ್ಲಿ ಪಾಲಿಕೆಯ ಘನತ್ಯಾಜ್ಯ ಟೆಂಡರ್ ಆಹ್ವಾನಿಸಲು ಒಪ್ಪಿಗೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಬಿಎಸ್‌ಡಬ್ಲ್ಯಎಂಎಲ್ ಟೆಂಡರ್ ಆಹ್ವಾನಿಸಿದೆ.
ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ:
ಟೆಂಡರ್‌ಅನ್ನು ಸಮರ್ಪಕವಾಗಿ ರೂಪಿಸಿಲ್ಲ. ಕೆಲವೊಂದು ಷರತ್ತು ಹಾಗೂ ಕೆಲಸ ವಿವರಗಳನ್ನು ಸರಿಯಾಗಿ ನಮೂದಿಸಿಲ್ಲ. ಜತೆಗೆ ನಿಗದಿತ ಮೊತ್ತದಲ್ಲಿ ಭಾರಿ ವ್ಯತ್ಯಾಸ ಮಾಡಲಾಗಿದೆ ಎಂಬ ಆಕ್ಷೇಪ ಕೆಲ ಗುತ್ತಿಗೆದಾರರಿಂದ ವ್ಯಕ್ತವಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೆಟ್ಟಿಲು ಏರಿದ್ದರು. ಪ್ರಕರಣ ಇತ್ಯರ್ಥ ಬಳಿಕ ಕೆಲವೊಂದು ಅಂಶಗಳ ಬಗ್ಗೆ ಬದಲಾವಣೆ ಮಾಡಿ ಹೊಸದಾಗಿ ಟೆಂಡರ್ ಆಹ್ವಾನಿಸಲು ಸರ್ಕಾರದ ಒಪ್ಪಿಗೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಸಂಪುಟದ ಅನುಮೋದನೆ ದೊರೆತು ಈಗ ಅಧಿಕೃತವಾಗಿ ಟೆಂಡರ್ ಅಧಿಸೂಚನೆ ಹೊರಡಿಸಲಾಗಿದೆ.