

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಿರಿಸಿದ್ದ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ಬಿಎಸ್ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಪಕ್ಷದ ಕಾರ್ಯಕರ್ತರು, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲು ಇರುವ ಅನುದಾನವನ್ನು ನಿರ್ದಿಷ್ಟ ಯೋಜನೆಗಳಿಗೆ ಬಳಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನ ಸಬಲರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯನ್ನು ರೂಪಿಸಲಾಯಿತು. ಇದರಿಂದ ಪರಿಶಿಷ್ಟರ ಅಭಿವೃದ್ಧಿ ಪೂರಕ ಎಂಬ ಆಶಾ ಭಾವನೆ ಎಲ್ಲರಲ್ಲಿತ್ತು. ಆದರೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿನಿಯಮದ ಆಶಯ ಜಾರಿಗೊಳಿಸದೆ ಅನ್ಯಾಯ ಮಾಡಿವೆ. 2014-15ನೇ ಸಾಲಿನಿಂದ ಇಲ್ಲಿಯವರೆಗೆ 2,94,963 ಕೋಟಿ ರೂಗಳನ್ನು ಪರಿಶಿಷ್ಟ ಅಭಿವೃದ್ಧಿಗೆ ಮೀಸಲಿರಿಸಲಾಗಿತ್ತು. ಆದರೆ ಶೇ.10ರಷ್ಟು ಹಣವನ್ನು ಪರಿಶಿಷ್ಟರಿಗೆ ತಲುಪಿಸದೆ ಆಳುವ ಸರ್ಕಾರಗಳು ದ್ರೋಹ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2023-24 ಮತ್ತು 2024-25ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ 25,398 ಕೋಟಿ ರೂಗಳನ್ನು ಗ್ಯಾರಂಟಿ ಯೋಜನೆಗೆ ಬಳಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 19 ಸಾವಿರ ಕೋಟಿ ರೂಗಳನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದೆ. ಅದೇ ರೀತಿ ಭೋವಿ ಅಭಿವೃದ್ಧಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮಗಳಲ್ಲಿ ಅವ್ಯವಹಾರ ನಡೆದಿದೆ. ಇದೀಗ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಪರಿಶಿಷ್ಟರ ಮೀಸಲು ಹಣ ದುರ್ಬಳಕೆ ಜತೆಗೆ ಜಾರಿಯಲ್ಲಿದ್ದ ಹಲವು ಯೋಜನೆಗಳನ್ನು ರದ್ದು ಮಾಡಲಾಗಿದೆ. ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಪ್ರೋತ್ಸಾಹಧನ ನಿಲ್ಲಿಸಲಾಗಿದೆ. ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಪ್ರಬುದ್ಧ ಯೋಜನೆಗೆ ಕೊಕ್ಕೆ ಹಾಕಲಾಗಿದೆ. ಶಾಲಾ, ಕಾಲೇಜು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯುವ ಆರಂಭದಲ್ಲೇ ಪೂರ್ಣ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಎರಡು ವರ್ಷದಿಂದ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿ ಕಾಯ್ದೆ ಜಾರಿಗೊಳಿಸಿಲ್ಲ, ಮ್ಯಾನೇಜ್ಮೆಂಟ್ ಕೋಟಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ರದ್ದುಗೊಳಿಸಲಾಗಿದೆ. ಆದರೂ ಸಹ ರಾಜ್ಯ ಸರ್ಕಾರ ನಿರ್ಲಕ್ಷೃ ತೋರಿದ್ದು, ಪರಿಶಿಷ್ಟ ಸಮುದಾಯದ ಶಾಸಕರು, ಸಂಸದರು, ಸಚಿವರು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಸ್.ಶಿವಶಂಕರ್, ಜಿಲ್ಲಾ ಉಸ್ತುವಾರಿ ಚೆಲುವರಾಜು, ಜಿಲ್ಲಾ ಸಂಯೋಜಕ ಮಹಾದೇವ, ವೆಂಕಟಗಿರಿಯಯ್ಯ ಇತರರಿದ್ದರು.