ಆಯೋಗದ ವರದಿ ಜಾರಿಗೆ ಆಗ್ರಹ: ನಗರದಲ್ಲಿ ಬಿಎಸ್ಪಿ ಕಾರ್ಯಕರ್ತರ ಪ್ರತಿಭಟನೆ

BSP workers Protest mandya
Published on

ಮಂಡ್ಯ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕಾಂತರಾಜ್ ಹಾಗೂ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಜಮಾಯಿಸಿದ ಅವರು, ಸಾಮಾಜಿಕ ನ್ಯಾಯ ಕಲ್ಪಿಸುವ ವರದಿಗಳನ್ನು ಜಾರಿ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು. ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಅಧ್ಯಯನ ಮತ್ತು ಜಾತಿವಾರು ಜನಗಣತಿ ನಡೆಸಲು ನೇಮಿಸಿದ್ದ ಕಾಂತರಾಜು ಆಯೋಗವು 2015ರಲ್ಲಿ ವರದಿ ಸಿದ್ಧಗೊಳಿಸಿತು. ಆ ವರದಿ ಸೋರಿಕೆಯಾದಾಗ ಎಸ್‌ಸಿ, ಎಸ್‌ಟಿ ಜನಸಂಖ್ಯೆಯು 1 ಕೋಟಿ 50 ಲಕ್ಷ, ಮುಸ್ಲಿಂ ಸಮುದಾಯ 85 ಲಕ್ಷ, ಲಿಂಗಾಯತರು 60 ಲಕ್ಷ ಮತ್ತು ಒಕ್ಕಲಿಗರು 50 ಲಕ್ಷ ಇರುವುದಾಗಿ ಗೊತ್ತಾಯಿತು. ಶಿಕ್ಷಣ, ಉದ್ಯೋಗ, ರಾಜಕೀಯ ಅಧಿಕಾರದಲ್ಲಿ ಸಿಂಹಪಾಲು ಪಡೆದಿದ್ದ ಮೇಲ್ವರ್ಗ ವರದಿ ಜಾರಿಯಾದರೆ ತಾವು ಇದುವರೆಗೂ ಅನುಭವಿಸಿಕೊಂಡು ಬರುತ್ತಿರುವ ಸವಲತ್ತು ಕಳೆದುಕೊಳ್ಳಬೇಕಾಗುತ್ತದೆ ಎಂದು ಅಳುಕಿ ವರದಿ ಬಹಿರಂಗಗೊಳ್ಳುವುದನ್ನು ಅಂದಿನ ದಿನಗಳಲ್ಲಿ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು ಎಂದು ಆರೋಪಿಸಿದರು.

ಅನಂತರ ಮುಖ್ಯಮಂತ್ರಿಯಾದ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ನಿರೀಕ್ಷಿಸಿದಂತೆ ಕಾಂತರಾಜು ಆಯೋಗದ ವರದಿಯ ಜಾರಿಗೆ ಮುಂದಾಗಲಿಲ್ಲ. ಕಾಂತರಾಜ ಅವರ ಅವಧಿ ಮುಗಿದ ನಂತರ ಆಯೋಗಕ್ಕೆ ಜಯಪ್ರಕಾಶ್ ಹೆಗ್ಗಡೆಯನ್ನು ಅಧ್ಯಕ್ಷರನ್ನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿ ಕೈ ತೊಳೆದುಕೊಂಡಿತು. ಇನ್ನು ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂತರಾಜ್ ವರದಿ ಮತ್ತು ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿ ಅಧಿಕಾರ ಹಿಡಿದು ಆರು ತಿಂಗಳಾದರೂ ಮೌನ ವಹಿಸುವ ಮೂಲಕ ಸಮಾಜಕ್ಕೆ ನಿರಂತರವಾಗಿ ದ್ರೋಹ ಮಾಡುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ಯೋಗಾನಂದ, ಎಚ್.ಎಸ್.ಶಿವರಾಜ್, ದಿನೇಶ್, ಡಿ.ಬಿ.ಆನಂದ್, ವೀರಭದ್ರಯ್ಯ ಚೆಲುವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net