ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಸರಿಯಲ್ಲ: ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಖಂಡನೆ

BSP state president press conference Mandya
Published on

ಮಂಡ್ಯ: ಮಳವಳ್ಳಿ ತಾಲೂಕು ಧನಗೂರಿನ ಸರ್ಕಾರಿ ಗೋಮಾಳದಲ್ಲಿ ಮೂರ‌್ನಾಲ್ಕು ದಶಕದಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಒಕ್ಕಲೆಬ್ಬಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.

ಗ್ರಾಮದ ಸರ್ವೇ ನಂ 277 ಹಾಗೂ 299ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರು ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದರು. ಈಗಾಗಲೇ ನಮೂನೆ 50, 53 ಮತ್ತು 57ರಲ್ಲಿ ಅನುಭವದಲ್ಲಿರುವಂತೆ ಹಕ್ಕುಪತ್ರ ವಿತರಿಸಲು ಅರ್ಜಿ ಸಲ್ಲಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನಲ್ಲಿ ಅಕ್ರಮವಾಗಿ ಸಾವಿರಾರು ಎಕರೆ ಖಾತೆ ಮಾಡಿಕೊಂಡಿರುವ ಹಿನ್ನಲೆ ತಂಡ ರಚಿಸಿ ತನಿಖೆ ಮಾಡಲಾಗುತ್ತಿದೆ. ಆ ತಂಡವು 23 ಜನ ಅನಧಿಕೃತವಾಗಿ ಖಾತೆ ಮಾಡಿಸಿಕೊಂಡಿದ್ದಾರೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರಂತೆ ಸೂಕ್ತ ಕ್ರಮ ಜರುಗಿಸುವಂತೆ ಉಪವಿಭಾಗಾಧಿಕಾರಿಗೆ ಸರ್ಕಾರ ಸೂಚಿಸಿದೆ. ಆದರೆ ಅವರು ಅಕ್ರಮ ಖಾತೆ ಮಾಡಿಕೊಂಡಿರುವವರನ್ನು ಬಿಟ್ಟು, ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

23 ಜನರು 60 ರಿಂದ 160 ಎಕರೆವರೆಗೂ ಭೂಮಿಯನ್ನು ಅಕ್ರಮ ಖಾತೆ ಮಾಡಿಸಿಕೊಂಡಿದ್ದಾರೆ. ಮಳವಳ್ಳಿ ತಾಲೂಕಿನ ಸ್ಥಳೀಯರೇ ಅಲ್ಲದ ಬೆಂಗಳೂರು, ಮಂಡ್ಯ ತಾಲೂಕು ಹಾಗೂ ಗೆಜ್ಜಲಗೆರೆ ಭಾಗದವರೇ ಹೆಚ್ಚಿದ್ದಾರೆ ತಿಳಿದು ಬಂದಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳದೆ ಬಗರ್ ಹುಕುಂ ಸಾಗುವಳಿದಾರರ ಜಮೀನಿನಲ್ಲಿ ಸೂಚನಾ ಫಲಕ ಅಳವಡಿಸಿ ಶೋಷಣೆ ನಡೆಸುತ್ತಿದ್ದಾರೆ. ಕೂಡಲೇ ಅಕ್ರಮ ಖಾತೆ ಮಾಡಿಸಿಕೊಂಡಿರುವುದನ್ನು ರದ್ದುಪಡಿಸಬೇಕು, ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕ್ಷೇತ್ರದ ಶಾಸಕರೇ ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದು, ಸಾಗುವಳಿ ಮಾಡುವ ರೈತರ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ಮಳವಳ್ಳಿ ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ, ರೈತರಾದ ಶಿವಣ್ಣ, ಆರ್.ಗೋವಿಂದರಾಜು, ಮಹದೇವ, ವೆಂಕಟರಾಮು, ಶಿವು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net