

ಮಂಡ್ಯ: ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕದಡುವಂತಹ ಪ್ರಯೋಗಗಳನ್ನು ನಿಯಂತ್ರಿಸಲು ಮಂಗಳೂರು ಮಾದರಿ ‘ಕೋಮು ಹಿಂಸೆ ನಿಗ್ರಹ ಪಡೆ’ ಆರಂಭಿಸುವಂತೆ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.
ಕೆಲ ವರ್ಷದಿಂದ ಜಿಲ್ಲೆಯಲ್ಲಿ ಕೋಮು ಪ್ರಯೋಗ ನಡೆಯುತ್ತಿವೆ. ಬಿಜೆಪಿ, ಸಂಘ ಪರಿವಾರ ಕೋಮು ವಿಷಬೀಜ ಬಿತ್ತಿ ಜಿಲ್ಲೆಯಲ್ಲಿ ನೆಲೆ ನಿಲ್ಲುವ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಸರ್ಕಾರ ಈಗಲೇ ಕಠಿಣ ಕ್ರಮ ಕೈಗೊಂಡು ಪೂರ್ವ ವಿರಾಮ ಹಾಕಬೇಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮದ್ದೂರು ಕಲ್ಲು ತೂರಾಟ ಪ್ರಕರಣ ನಡೆದಿರುವುದು ಖಂಡನಾರ್ಹ. ತಪ್ಪಿತಸ್ಥರಲ್ಲಿ ಒಬ್ಬನೂ ತಪ್ಪಿಸಿಕೊಳ್ಳದಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಯ ನಂತರ ಕರ್ಫ್ಯೂ ಇದ್ದರೂ ಕಾನೂನು ಮೀರಿ ಪ್ರತಿಭಟನೆ ನಡೆಸಿದವರು ಹಾಗೂ ರಾಮ್ ರಹೀಂ ನಗರದ ಮಸೀದಿಗೆ ನುಗ್ಗುತ್ತೇವೆ ಎಂದವರನ್ನು ಬಂಧಿಸಬೇಕು. ಇನ್ನು ನಾಗಮಂಗಲದಲ್ಲಿ ಕ್ರಮ ಕೈಗೊಂಡ ರೀತಿ ಎಚ್ಚರ ವಹಿಸಿದ್ದರೆ, ಮದ್ದೂರಲ್ಲಿ ಗಲಭೆ ನಡೆಯುತ್ತಿರಲಿಲ್ಲ. ಪೊಲೀಸರು ಘಟನೆ ನಡೆದ ಗಂಟೆಯಲ್ಲಿ 22 ಜನರನ್ನು ಬಂಧಿಸಿರುವುದು ಶ್ಲಾಘನೀಯ ಎಂದರು.
ರಾಜ್ಯಲ್ಲಿ ಕಾಂಗ್ರೆಸ್ ಒಂದು ಸಮುದಾಯವನ್ನು ಓಲೈಸುವ ವಿಕೃತ ಮನಸ್ಥಿತಿ ಹೊಂದಿದೆ. ಬೆಂಗಳೂರಿನ ಕೆ.ಜಿ ಹಳ್ಳಿ, ಡಿ.ಜಿ ಹಳ್ಳಿ, ಮೈಸೂರಿನ ಉದಯಗಿರಿ ಗಲಭೆ ಪ್ರಕರಣದಲ್ಲಿ ಬಂಧಿತರ ಮೇಲಿನ ಪ್ರಕರಣಗಳ ಖುಲಾಸೆ ಮಾಡಿರುವುದು ಸರಿಯಲ್ಲ. ಒಂದು ಸಮುದಾಯದ ಬಗ್ಗೆ ಮೃದುಧೋರಣೆ ಅನುಸರಿಸುತ್ತಿರುವುದು ರಾಜ್ಯದಲ್ಲಿ ಕುಕೃತ್ಯಗಳಿಗೆ ಪ್ರಚೋದನೆ ನೀಡಿದಂತಾಗಿದೆ ಎಂದು ಖಂಡಿಸಿದರು.
ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ಮದ್ದೂರು ತಾಲೂಕು ಅಧ್ಯಕ್ಷ ಶಂಕರ್, ಮಳವಳ್ಳಿ ತಾಲೂಕು ಅಧ್ಯಕ್ಷ ವಿ.ನಂಜುಂಡಸ್ವಾಮಿ, ಬಸವರಾಜು, ದೇವರಾಜು ಇತರರಿದ್ದರು.